ಗೋವಾದ ಡುರಾಂಡ್ ಕಪ್ ಅ.28ರಿಂದ
ಮುಂಬೈ: ಭಾರತದ ಪ್ರಮುಖ ಫುಟ್ಬಾಲ್ ಟೂರ್ನಿಯಲ್ಲಿ ಒಂದಾಗಿರುವ 127ನೇ ಡುರಾಂಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಮುಂಬರುವ ಅಕ್ಟೋಬರ್ 28ರಿಂದ ನವೆಂಬರ್ 9ರವರೆಗೆ ಗೋವಾದಲ್ಲಿ ನಡೆಯಲಿದೆ.
1888ರಲ್ಲಿ ಆರಂಭವಾದ ಈ ಪಂದ್ಯಾವಳಿಯ ಪ್ರಸ್ತುತ ಪ್ರಶಸ್ತಿ ಮೊತ್ತ 50 ಲಕ್ಷ. ಅಲ್ಲದೆ ಈ ಪಂದ್ಯಾವಳಿ ವಿಶ್ವದಲ್ಲೇ ಅತ್ಯಂತ 3ನೇ ಹಳೇಯ ಪಂದ್ಯಾವಳಿ ಎಂಬ ಖ್ಯಾತಿ ಪಡೆದಿದೆ.
ಈ ಪಂದ್ಯಾವಳಿಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದ್ದು, ಅರ್ಹತಾ ಸುತ್ತಿನ ಹಂತದಲ್ಲಿ 12-16 ತಂಡಗಳನ್ನು ಗುಂಪುಗಳಾಗಿ ವಿಂಗಡಿಸಲಾಗುವುದು. ನಂತರ ಗುಂಪುಗಳ ಅಗ್ರ ಎರಡು ತಂಡಗಳು ಪ್ರಮುಖ ಸುತ್ತಿಗೆ ಪ್ರವೇಶಿಸಲಿವೆ.
ಇನ್ನು ಈ ಮಹತ್ವದ ಟೂರ್ನಿಯಲ್ಲಿ ಕೆಲವು ಸ್ಥಳೀಯ ತಂಡಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಗೋವಾದ ಕೆಲವು ಡಿವಿಷನ್ ತಂಡಗಳು ಅರ್ಹತ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಇದುವರೆಗೂ ದೆಹಲಿಯಲ್ಲಿ ನಡೆಯುತ್ತಿದ್ದ ಈ ಪಂದ್ಯಾವಳಿ ಇದೇ ಮೊದಲ ಬಾರಿಗೆ ಹೊರ ರಾಜ್ಯದಲ್ಲಿ ನಡೆಯುತ್ತಿದ್ದು, ಇದರ ಆತಿಥ್ಯವನ್ನು ಗೋವಾ ವಹಿಸಿಕೊಂಡಿದೆ.
ಗೋವಾದಿಂದ ಐಲೀಗ್ ಹಾಗೂ ಭಾರತೀಯ ಸೇನಾ ತಂಡಕ್ಕೆ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡಿದ್ದು, ಇಲ್ಲಿ ಹೆಚ್ಚು ಅಭಿಮಾನಿಗಳಿರುವ ನಿಟ್ಟಿನಲ್ಲಿ ಈ ಪಂದ್ಯಾವಳಿಯ ಆತಿಥ್ಯ ಗೋವಾ ಪಾಲಾಗಿದೆ.
ಲೆಫ್ಟಿನೆಂಟ್ ಜೆನರಲ್ ಪಿ.ಆರ್ ಶಂಕರ್ ಸೇರಿದಂತೆ ಇತರೆ ಪ್ರಮುಖ ಅಧಿಕಾರಿ ಕಳೆದ ತಿಂಗಳು ಇಲ್ಲಿನ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದು, ಇಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.