ಐಪಿಟಿಎಲ್ ವಿರುದ್ಧವಾಗಿ ಸಿಟಿಎಲ್ ಆರಂಭಿಸಿಲ್ಲ: ವಿಜಯ್ ಅಮೃತ್‌ರಾಜ್
ನವದೆಹಲಿ: ಚಾಂಪಿಯನ್ಸ್ ಟೆನಿಸ್ ಲೀಗ್ ಅನ್ನು ಮಹೇಶ್ ಭೂಪತಿ ಆರಂಭಿಸಿರುವ ಐಪಿಟಿಎಲ್‌ಗೆ ಪರಿರ್ಯಾಯವಾಗಿ ಆರಂಭಿಸಿಲ್ಲ ಎಂದು ಟೆನಿಸ್ ದಂತಕತೆ ವಿಜಯ್ ಅಮೃತ್‌ರಾಜ್ ಹೇಳಿದ್ದಾರೆ.
ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಅವರು ಐಪಿಟಿಎಲ್ ಪಂದ್ಯಾವಳಿ ಆರಂಭಿಸಿದ ನಂತರ, ಅಮೃತ್‌ರಾಜ್ ಅವರು ಸಿಟಿಎಲ್ ಆರಂಭಿಸಿದ್ದರು. ಎರಡು ಲೀಗ್‌ಗಳ ಮಾದರಿ ಒಂದೇ. ಆದರೆ, ಸಿಟಿಎಲ್ ಲೀಗ್‌ನಲ್ಲಿ ಹರಾಜು ಪ್ರಕ್ರಿಯೆ ಇರುವುದಿಲ್ಲ. ತಂಡಗಳ ಆಧಾರದ ಮೇಲೆ ಪಂದ್ಯಾವಳಿಯನ್ನು ನಡೆಸಲಾಗುತ್ತದೆ. ಅಲ್ಲದೆ ಇದು 10 ದಿನಗಳ ಕಾಲ ಮಾತ್ರ ನಡೆಯುತ್ತದೆ. ಒಂದು ಪಂದ್ಯಾವಳಿ ಇನ್ನೊಂದು ಪಂದ್ಯಾವಳಿಗೆ ಸ್ಪರ್ಧಿಯಲ್ಲ. ಮಹತ್ವದ ವಿಷಯವೆಂದರೆ, ಮಹೇಶ್ ಭೂಪತಿ ಅವರು ಏಷ್ಯಾದಾದ್ಯಂತ ಟೂರ್ನಿ ನಡೆಸುತ್ತಿದ್ದಾರೆ.
ಆದರೆ, ಇದು ಏಷ್ಯಾ ರಾಷ್ಟ್ರಗಳಿಗೆ ಶುಭ ಸುದ್ದಿ ಎಂದಿದ್ದಾರೆ. ಎರಡೂ ಪಂದ್ಯಾವಳಿಗಳಲ್ಲೂ ಆಟಗಾರರು ಭಾಗವಹಿಸಬಹುದು. ಆಟಗಾರರಿಗೆ ಇದೊಂದು ಅವಕಾಶವಾಗಿದೆ. ಬೇಡವಾದರೆ ಒಂದೇ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು ಎಂದು ಎರಡೂ ಲೀಗ್‌ಗಳು ಒಂದೇ ಸಮಯದಲ್ಲಿ ನಡೆಯುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಸಿಟಿಎಲ್ ನವೆಂಬರ್ 17ರಿಂದ 26ರವರೆಗೆ ನಡೆಯಲಿದೆ. ಇನ್ನು ಐಪಿಟಿಎಲ್ ನವೆಂಬರ್ 28ರಿಂದ ಡಿಸೆಂಬರ್ 20ರವರೆಗೆ ನಡೆಯಲಿದೆ. ಭಾರತಕ್ಕೆ ಇನ್ನೊಂದು ಎಟಿಪಿ ಪಂದ್ಯಾವಳಿಯನ್ನು ದೊರಕಿಸಲು ಹಲವಾರು ಜನರು ಯತ್ನಿಸುತ್ತಿದ್ದಾರೆ. ಆದರೆ, ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.