ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪದಕದ ನಿರೀಕ್ಷೆಯಲ್ಲಿ ಅಶ್ವಿನಿ

ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದು ಒಂದು ವರ್ಷ ನಿಷೇಧದ ನಂತರ ಮರಳಿರುವ ಅಥ್ಲೀಟ್ ಅಶ್ವಿನಿ ಅಕ್ಕುಂಜೆ...

Vishwanath S
Updated On : 17 Jul 2014, 12:52 pm

ನವದೆಹಲಿ: ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದು ಒಂದು ವರ್ಷ ನಿಷೇಧದ ನಂತರ ಮರಳಿರುವ ಅಥ್ಲೀಟ್ ಅಶ್ವಿನಿ ಅಕ್ಕುಂಜೆ, ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆಯುವ ವಿಶ್ವಾಸದಲ್ಲಿದ್ದಾರೆ.
2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ಪದಕ ಪಡೆಯುವಲ್ಲಿ ವಿಫಲರಾಗಿದ್ದ ಅಶ್ವಿನಿ, ಈ ಬಾರಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನಿಸುತ್ತೇನೆ. ಚಿನ್ನದ ಪದಕ ಗೆಲ್ಲುವ ಉದ್ದೇಶವಿದೆ. ಈ ಬಾರಿ ಹೆಚ್ಚು ಸವಾಲುಗಳು ಮುಂದೆ ಇದೆ. ಆದರೆ ನಾನು ಉತ್ತಮ ಟೈಮಿಂಗ್ ಕಾಯ್ದುಕೊಂಡಿರುವುದು ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ತಿಳಿಸಿದರು.
54ನೇ ಅಂತರ್ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಶ್ವಿನಿ, 57.43 ಸೆಕೆಂಡ್‌ಗಳಲ್ಲಿ ಓಡಿ ನೂತನ ದಾಖಲೆ ನಿರ್ಮಿಸಿದ್ದರು.
ನಾವು ಅತ್ಯುತ್ತಮವಾಗಿ ಅಭ್ಯಾಸ ನಡೆಸಿದ್ದೇವೆ. ಆದರೆ ಕೆಲವು ಅಥ್ಲೀಟ್‌ಗಳು ಅಂತಾರಾಷ್ಟ್ರೀಯ ಮಟ್ಟದ ಅನುಭವ ಹೊಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಭಾಗವಹಿಸಿದಂತೆ ಕ್ರೀಡಾಪಟುವಿನಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.
ಅಥ್ಲೀಟ್‌ಗಳ  ಹೀನಾಯ ಪರಿಸ್ಥಿತಿ
ನವದೆಹಲಿ: ಕೆಲವೇ ದಿನಗಳಲ್ಲಿ ಗ್ಲಾಸ್ಗೋದಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿರುವ ಭಾರತೀಯ ಅಥ್ಲೀಟ್‌ಗಳ ಹಾಗೂ ತರಬೇತುದಾರರಿಗೆ ಪಟಿಯಾಲದಲ್ಲಿರುವ  ಪರಿಸ್ಥಿತಿ ತೀರಾ ಶೋಚನಿಯವಾಗಿದ್ದು, ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವಿಗೆ ಸಿಗಬೇಕಾದ ಸೌಲಭ್ಯಗಳು ದೊರೆಯದೆ ಪರದಾಡುವಂತಿದೆ.
ಇನ್ನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಟೇಬಲ್ ಟೆನಿಸ್ ಆಟಗಾರ ಎ ಶರತ್ ಕಮಲ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿನ ಸೌಲಭ್ಯಗಳು ಆರೋಗ್ಯಕ್ಕೆ ಯೋಗ್ಯಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ತಮ್ಮ ತಯಾರಿ ನಡೆಸಲು ಉತ್ತಮ ಸೌಲಭ್ಯಗಳಿವೆ ಆದರೆ ವಾಸಿಸಲು ಇರುವ ಪರಿಸ್ಥಿತಿ ತೀರಾ ಕಳಪೆಯಾಗಿದೆ. ಎಲ್ಲರಿಗೂ ಸಾಮಾನ್ಯ ಶೌಚಾಲಯವಿದ್ದು, ಹೊಲಸಿನಿಂದ ಕೂಡಿದೆ. ಇನ್ನು ಇಲ್ಲಿನ ತಾಪಮಾನಕ್ಕೆ ಕೊಠಡಿಗಳಲ್ಲಿನ ಹವಾನಿಯಂತ್ರಕ ಯಾವುದೇ ಪರಿಣಾಮ ಬೀರುತ್ತಿಲ್ಲ. ನಾವು ಐಷಾರಾಮಿ ಸೌಲಭ್ಯಗಳನ್ನುಕೇಳುತ್ತಿಲ್ಲ. ನಮ್ಮ ಕ್ರೀಡೆಗಳಲ್ಲಿ ಉತ್ತಮ ತಯಾರಿ ನಡೆಸಿ ಕ್ರೀಡಾಕೂಟಕ್ಕೆ ತೆರಳಲು ಬೇಕಾಗಿರುವ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳುತ್ತಿದ್ದೇವೆ ಎಂದರು.
ನಾನು ಪಟಿಯಾಲದಲ್ಲಿರುವ ಕ್ರೀಡಾ ಸಂಸ್ಥೆಯಲ್ಲಿ ಹೆಚ್ಚು ದಿನಗಳು ಇರುವುದಿಲ್ಲ. ಆದರೆ ಇತರೆ ಅಥ್ಲೀಟ್‌ಗಳು ವರ್ಷದಲ್ಲಿ ಬಹುತೇಕ ಸಮಯ ಇಲ್ಲಿ ನೆಲೆಸಬೇಕಾಗಿರುತ್ತದೆ ಹಾಗಾಗಿ ಅವರ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಬೇಸರ ವ್ಯಕ್ತವಾಗುತ್ತದೆ. ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವಿಗೆ ಈ ರೀತಿಯಾದ ಸೌಲಭ್ಯ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶರತ್‌ಗೆ ನೀಡಲಾಗಿರುವ ಕೊಠಡಿ ಕಳಪೆಯಾಗಿರುವುದರಿಂದ ಅವರ ಕೋಚ್ ಪೀಟರ್ ಎಂಗಲ್ ಅವರಿಗೆ ನೀಡಲಾಗಿರುವ ಅಪಾರ್ಟ್‌ಮೆಂಟ್‌ನಲ್ಲೆ ಮಲಗುತ್ತಿದ್ದಾರೆ.
ನನ್ನ ಕೋಚ್ ನೆರವಿಗೆ ಬಂದಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement