ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ರಿಸ್ಬೇನ್‌ನಲ್ಲೂ ಡ್ರಾ ಕಂಡ 'ಎ' ತಂಡ

Vishwanath S
Updated On : 17 Jul 2014, 12:52 pm

ಬ್ರಿಸ್ಬೇನ್: ಪಂದ್ಯದ ಕೊನೆಯ ದಿನಾಂತ್ಯದಲ್ಲಿ ಭಾರತ 'ಎ' ತಂಡದ ಬೌಲರ್‌ಗಳು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಂದ ಬಲಿಷ್ಠ ಪ್ರದರ್ಶನ ಎದುರಿಸುವ ಮೂಲಕ, ಮಳೆಯೂ ಅಡ್ಡಿಪಡಿಸುವುದರೊಂದಿಗೆ ಎರಡನೇ ಮತ್ತು ಕೊನೆಯ ಅನಧಿಕೃತ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ಮಂದಬೆಳಕಿನ ಕಾರಣ ಮಂಗಳವಾರ ಬೇಗನೆ ನಿಲ್ಲಿಸಲಾಗಿದ್ದ ಪಂದ್ಯವನ್ನು, ಬುಧವಾರ ಮುಂದುರಿಸಿದ ಆಸ್ಟ್ರೇಲಿಯಾ ತಂಡದ ಪರವಾಗಿ ಫಿಲಿಪ್ ಹ್ಯೂಸ್ (ಅಜೇಯ 100) ಮತ್ತು ಅಲೆಕ್ಸ್ ಡೂನಾಲ್ಡ್ (91) ಮುರಿಯದ ಜತೆಯಾಟದಲ್ಲಿ 202 ರನ್ ಗಳಿಸಿದರು. ನಂತರ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಬುಧವಾರ 50 ಓವರ್‌ಗಳ ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಯಿತು.
141 ಎಸೆತಗಳನ್ನು ಎದುರಿಸಿದ ಹ್ಯೂಸ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 26ನೇ ಶತಕ ದಾಖಲಿಸಿದರು. ಅವರ ಶತಕದಲ್ಲಿ 1 ಸಿಕ್ಸರ್ ಮತ್ತು 16 ಬೌಂಡರಿಗಳು ಸೇರಿದ್ದವು. ಇನ್ನು ಡೂನಾಲ್ಡ್ ಅವರು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 21ನೇ ಅರ್ಧ ಶತಕ ದಾಖಲಿಸಿದರು. ಅವರ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 13 ಬೌಂಡರಿಗಳು ಸೇರಿದ್ದವು.
ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಮತ್ತು ಬ್ಯಾಟಿಂಗ್‌ನಲ್ಲೂ ಮಿಂಚಿ 90 ರನ್ ಗಳಿಸಿದ್ದ ಉಮೇಶ್ ಯಾದವ್, ದ್ವಿತೀಯ ಇನಿಂಗ್ಸ್‌ನಲ್ಲಿ 13 ಓವರ್‌ಗಳಲ್ಲಿ ವಿಕೆಟ್ ಪಡೆಯದೇ 75 ರನ್ ನೀಡಿ ದುಬಾರಿ ಎನಿಸಿದರು. ಲೈನ್ ಮತ್ತು ಲೆಂಥ್ ಇಲ್ಲದ ಬೌಲಿಂಗ್ ಪ್ರದರ್ಶಿಸಿದ್ದು, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗಿ ಪರಿಣಮಿಸಿತು. ಮಧ್ಯಮ ವೇಗಿ ಜಾಸ್ಪ್ರೀತ್ ಬುಮ್ರಾ, ಆಫ್ ಸ್ಪಿನ್ನರ್ ಬಾಬಾ ಅಪರಾಜಿತ ಹಾಗೂ ಮಧ್ಯಮ ವೇಗಿ ಅನುರೀತ್ ಸಿಂಗ್ ಅವರು ಸಹ ಕೊನೆಯ ದಿನ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಆದರೆ, ಮನೋಜ್ ತಿವಾರಿ ನಾಯಕತ್ವದ ಭಾರತ 'ಎ' ತಂಡ ನಾಲ್ಕು ದಿನಗಳ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 501 ರನ್ ಗಳಿಸುವ ಮೂಲಕ ಮಿಂಚಿದ್ದು ತಂಡದ ಸಾಧನೆಯಾಗಿತ್ತು.
ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ನಮನ್ ಓಜಾ ಸರಣಿಯಲ್ಲಿ ಮೂರು ಶತಕ ದಾಖಲಿಸಿದರು. ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಓಜಾ, ಎರಡನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು. ಆ ಪಂದ್ಯ ಸಹ ಡ್ರಾದಲ್ಲಿ ಅಂತ್ಯಗೊಂಡಿತ್ತು. ಜೇಮ್ಸ್ ಫಾಕ್ನರ್ ನಾಯಕತ್ವದ ತಂಡ ಸಹ ಸರಣಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿತು. ಬೆನ್ ಕಟಿಂಗ್ ಅವರು 96 ರನ್ ಗಳಿಸುವುದರೊಂದಿಗೆ, ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು.ಕಟಿಂಗ್  ಜತೆ ಹೊಸ ಚೆಂಡು ಹಂಚಿಕೊಂಡ ಮಧ್ಯಮ ವೇಗಿ ಚಡ್ ಸಾಯೆರ್ಸ್ ಅವರು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 6ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದರು.   ಈಗ ಭಾರತ 'ಎ' ತಂಡ 50 ಓವರ್‌ಗಳ ಚತುಷ್ಕೋನ ಸರಣಿಯಲ್ಲಿ ಭಾಗವಹಿಸಲು ಡಾರ್ವಿನ್‌ಗೆ ತೆರಳಲಿದೆ. ಸರಣಿಯಲ್ಲಿ ಆಸ್ಟ್ರೇಲಿಯಾ 'ಎ', ದಕ್ಷಿಣ ಆಫ್ರಿಕಾ 'ಎ' ಹಾಗೂ ಆಸ್ಟ್ರೇಲಿಯಾದ ರಾಷ್ಟ್ರೀಯ ಶ್ರೇಷ್ಠ ತಂಡ ಚತುಷ್ಕೋನ ಸರಣಿಯಲ್ಲಿ ಭಾಗವಹಿಸಲಿವೆ.ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ 'ಎ' ಮೊದಲ ಇನಿಂಗ್ಸ್ 423
ಭಾರತ 'ಎ' ಮೊದಲ ಇನಿಂಗ್ಸ್ 501
ಆಸ್ಟ್ರೇಲಿಯ 'ಎ' ದ್ವಿತೀಯ ಇನಿಂಗ್ಸ್ 202
ಹ್ಯೂಸ್ ಅಜೇಯ 100, ಅಲೆಕ್ಸ್ ಡೂನಾಲ್ಡ್ ಅಜೇಯ 91. ಬೌಲಿಂಗ್: ಉಮೇಶ್ ಯಾದವ್ 75 ರನ್, ಅನುರೀತ್ ಸಿಂಗ್ 38 ರನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement