ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವೇಗಿಗಳ 'ಸ್ವರ್ಗ'ದಲ್ಲಿ ಭಾರತಕ್ಕೆ ಅಗ್ನಿಪರೀಕ್ಷೆ

Vishwanath S
Updated On : 17 Jul 2014, 12:52 pm

ಲಂಡನ್: ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಆತಿಥೇಯ ವೇಗಿ ಜೇಮ್ಸ್ ಆ್ಯಂಡರ್ಸನ್ ನಡುವಿನ ಸಂಘರ್ಷ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಇಂಗ್ಲೆಂಡ್ ಮತ್ತು ಭಾರತ ತಂಡಗಳು ಇದೀಗ ಎರಡನೇ ಟೆಸ್ಟ್‌ನಲ್ಲಿ ಮುಖಾಮುಖಿಗೆ ತಯಾರಿಯಲ್ಲಿ ತೊಡಗಿವೆ.
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಭೋಜನ ವಿರಾಮದ ವೇಳೆಗೆ ಜೇಮ್ಸ್ ಆ್ಯಂಡರ್ಸನ್, ಜಡೇಜಾರನ್ನು ನಿಂದಿಸಿದ ಮತ್ತು ಕೈಯಿಂದ ನೂಕಿದ ಆರೋಪಕ್ಕೆ ಗುರಿಯಾಗಿದ್ದು, ಭಾರತ ತಂಡದ ವ್ಯವಸ್ಥಾಪಕರು ಈ ಕುರಿತು ದೂರು ದಾಖಲಿಸಿದ್ದು, ವಿಚಾರಣೆ ನಂತರ ಇನ್ನಷ್ಟೇ ತೀರ್ಪುಹೊರಬೀಳಬೇಕಿದೆ.
ಈ ಮಧ್ಯೆ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದರೂ ಎಚ್ಚರಿಕೆ ಗಂಟೆಯೊಂದು ಸಿಕ್ಕಿದೆ. ಮೊದಲ ಇನಿಂಗ್ಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಮೊತ್ತ ಕಲೆಹಾಕಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಗುರಿಪಡಿಸಿದ್ದ ಭಾರತಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಹಿನ್ನಡೆ ಎದುರಾಗಿತ್ತು. ಆತಿಥೇಯ ಪಡೆ ಮೈಕೊಡವಿ ಮೇಲೆದ್ದು ಬರುವ ಮೂಲಕ ಭಾರತವನ್ನೇ ಸಂದಿಗ್ಧ ಪರಿಸ್ಥಿತಿಗೆ ನೂಕಿತ್ತು. ಹಾಗಾಗಿ, ಮೊದಲ ಪಂದ್ಯದಲ್ಲಿ ಉತ್ತಮ ಪಾಠ ಕಲಿತಿರುವ ಭಾರತ, ಗುರುವಾರ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಎಚ್ಚರಿಕೆಯಿಂದಲೇ ಹೆಜ್ಜೆ ಇಡಬೇಕಾಗಿದೆ.
ಭಾರತಕ್ಕೆ ಮತ್ತೊಮ್ಮೆ ಆರಂಭಿಕ ಸಮಸ್ಯೆ ಎದುರಾಗಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಮುರಳಿ ವಿಜಯ್ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಶತಕ (146 ರನ್) ಹಾಗೂ ಎರಡನೇ ಇನಿಂಗ್ಸ್‌ನಲ್ಲಿ (52) ಅರ್ಧಶತಕ ಬಾರಿಸಿ ಎದುರಾಳಿ ಪಾಲಿಗೆ ಅಪಾಯಕಾರಿ ಎಂಬಂತೆ ಗುಡುಗಿದ್ದಾರೆ. ಆದರೆ, ಜೊತೆಗಾರರಾಗಿ ಆಗಮಿಸಿದ್ದ ಶಿಖರ್ ಧವನ್ ಎರಡೂ ಇನಿಂಗ್ಸ್‌ಗಳಲ್ಲಿ ವಿಫಲರಾಗಿದ್ದು ತಂಡವನ್ನು ಚಿಂತೆಗೀಡು ಮಾಡಿದೆ.
ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸಹ ಎರಡೂ ಇನಿಂಗ್ಸ್‌ಗಳಲ್ಲಿ ವೈಯಕ್ತಿಕ ಎರಡಂಕಿಯ ಗಡಿ ಕೂಡ ತಲುಪದೇ ಇದ್ದುದು ಮತ್ತೊಂದು ಆತಂಕಕಾರಿ ಬೆಳವಣಿಗೆ. ಇನ್ನು ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಉತ್ತಮ ಲಯ ತೋರಿದ್ದರೂ ವೈಯಕ್ತಿಕವಾಗಿ ಬೃಹತ್ ಮೊತ್ತ ಪೇರಿಸಲು ವಿಫಲರಾಗಿದ್ದಾರೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮೊದಲ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಆಲ್‌ರೌಂಡ್ ಪ್ರತಿಭೆ ಕರ್ನಾಟಕದ ಸ್ಟುವರ್ಟ್ ಬಿನ್ನಿ ಗಮನ ಸೆಳೆದಿದ್ದು ತಂಡಕ್ಕೆ ಲಾಭ ತಂದುಕೊಟ್ಟಿದೆ.
ಬೌಲಿಂಗ್‌ನಲ್ಲಿ ಮಧ್ಯಮ ವೇಗಿಗಳಾದ ಇಶಾಂತ್, ಭುವನೇಶ್ವರ ಮತ್ತು ಶಮಿ ಮಿಂಚಿದ್ದಾರೆ. ಇಂಗ್ಲೆಂಡ್ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡಲಿರುವ ಕಾರಣ ರವೀಂದ್ರ ಜಡೇಜಾ ಹೊರತುಪಡಿಸಿ ತಜ್ಞಸ್ಪಿನ್ನರ್‌ಗೆ ಅವಕಾಶ ನೀಡಿರಲಿಲ್ಲ. ಎರಡನೇ ಟೆಸ್ಟ್‌ನಲ್ಲಿ ಅಶ್ವಿನ್‌ಗೆ ಸ್ಥಾನ ದೊರೆಯುವುದೇ ನೋಡಬೇಕು.
ಮತ್ತೊಂದೆಡೆ ಇಂಗ್ಲೆಂಡ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಹ ಎರಡನೇ ಇನಿಂಗ್ಸ್‌ನಲ್ಲಿ ತಿರುಗಿಬೀಳುವ ಮೂಲಕ ಗೆಲ್ಲುವ ಅವಕಾಶವನ್ನೂ ಕಂಡುಕೊಂಡಿತ್ತು. ಜೋ ರೂಟ್ಸ್, ರಾಬ್ಸನ್, ಬ್ಯಾಲೆನ್ಸ್, ಬ್ರಾಡ್ ಮತ್ತು ಆ್ಯಂಡರ್ಸನ್ ಜಿಗುಟುತನದ ಬ್ಯಾಟಿಂಗ್ ಪ್ರದರ್ಶಿಸಿ ತಮ್ಮ ತಂಡಕ್ಕೆ ಆಸರೆಯಾಗಿದ್ದರು. ನಾಯಕ ಆರಂಭಿಕ ಅಲಸ್ಟೇರ್ ಕುಕ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಇಯಾನ್ ಬೆಲ್ ಉತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿದರೆ, ಭಾರತದ ಬೌಲರ್‌ಗಳು ವಿಕೆಟ್ ಪಡೆಯಲು ಕಷ್ಟಪಡಬೇಕಾಗುತ್ತದೆ.
ಬೌಲಿಂಗ್‌ನಲ್ಲಿ ಆ್ಯಂಡರ್ಸನ್, ಬ್ರಾಡ್, ಪ್ಲಂಕೆಟ್, ಅಲಿ, ಸ್ಟೋಕ್ಸ್ ಭರವಸೆ ಮೂಡಿಸಿದ್ದಾರೆ. ಮೇಲಾಗಿ ತವರಿನ ಲಾಭ ಹೊಂದಿರುವ ಇಂಗ್ಲೆಂಡ್‌ಗೆ ಗೆಲ್ಲುವ ಅವಕಾಶಗಳೇ ಹೆಚ್ಚು.
ವೇಗಿಗಳಿಗೆ ಪಿಚ್ ನೆರವು:
ಪಂದ್ಯ ನಡೆಯಲಿರುವ ಲಾರ್ಡ್ಸ್ ಮೈದಾನ ವೇಗಿಗಳಿಗೆ ನೆರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಈ ಅಂಗಣದಲ್ಲಿ ಬೌಲರ್‌ಗಳು ಯಶಸ್ವಿಯಾಗಿದ್ದೇ ಹೆಚ್ಚು. 2008-2014ರ ಅವಧಿಯಲ್ಲಿ ಇಲ್ಲಿ ನಡೆದ ಪಂದ್ಯಗಳಲ್ಲಿ ವೇಗಿಗಳು 21.95ರ ಸರಾಸರಿಯಲ್ಲಿ 165 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸ್ಪಿನ್ನರ್‌ಗಳಿಗೆ 29.28ರ ಸರಾಸರಿಯಲ್ಲಿ 69 ವಿಕೆಟ್‌ಗಳು ದಕ್ಕಿವೆ.
ಅದೇ ರೀತಿ 2000-2007ರ ನಡುವಿನ ಅವಧಿಯಲ್ಲೂ ಸಹ ವೇಗದ ಬೌಲರ್‌ಗಳು 27.68ರ ಸರಾಸರಿಯಲ್ಲಿ 145 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗಾಗಿ, ಉಭಯ ತಂಡಗಳು ಒಬ್ಬ ಸ್ಪಿನ್ನರ್‌ನನ್ನು ಮಾತ್ರ ಹೊಂದಲಿದ್ದು,  ಉಳಿದಂತೆ ವೇಗಿಗಳಿಗೆ ಮಣೆಹಾಕುವ ಸಾಧ್ಯತೆಯೇ ಹೆಚ್ಚು.
ಈ ಪರಿಸ್ಥಿತಿಯಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಬೆಂಚ್ ಕಾಯಿಸಬೇಕಾಗಬಹುದು. ಜಡೇಜಾ ಮುಂದುವರಿಯಲಿದ್ದು, ಎರಡನೇ ಟೆಸ್ಟ್‌ಗಾಗಿ ನಾಯಕ ಧೋನಿ ತಂಡದಲ್ಲಿ ಬದಲಾವಣೆ ತರುವ ಸಾಧ್ಯತೆ ವಿರಳ ಎನಿಸಿದೆ.
ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಸ್ಟುವರ್ಟ್ ಬಿನ್ನಿ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಈಶ್ವರ್ ಪಾಂಡೆ, ಪಂಕಜ್ ಸಿಂಗ್, ವರುಣ್ ಆರುಣ್, ವೃದ್ಧಿಮಾನ್ ಸಹಾ.
ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ಸ್ಟುವರ್ಟ್ ಬ್ರಾಡ್, ಕ್ರಿಸ್ ಜೋರ್ಡಾನ್, ಲಿಯಮ್ ಪ್ಲಂಕೆಟ್, ಮ್ಯಾಟ್ ಪ್ರಯರ್, ಸ್ಯಾಮ್ ರಾಬ್ಸನ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಸೈಮನ್ ಕೆರಿಗಾನ್.    
ಪಂದ್ಯ ಆರಂಭ: ಮಧ್ಯಾಹ್ನ 3.39 ಗಂಟೆ (ಭಾರತೀಯ ಕಾಲಮಾನ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement