ತವರಿನ ಕೈತಪ್ಪಿದ ಚಿನ್ನದಂಥ ಅವಕಾಶ
ಹೈದರಾಬಾದ್: ಪ್ರತಿಷ್ಠಿತ ಕಾಮನಲ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕದ ನಿರೀಕ್ಷೆಯಾಗಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್ನಲ್ಲಿ ಭಾರತದ ಪದಕದ ಆಸೆ ಕಮರಿದ್ದು, ನಿರೀಕ್ಷೆ ಹೊತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಲ್ಲಿ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸೈನಾ ನೆಹ್ವಾಲ್, ಇನ್ನು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗದ ಹಿನ್ನಲೆಯಲ್ಲಿ ಭಾರತ ತಂಡದ ಜತೆಗೆ ಗ್ಲಾಸ್ಗೋಗೆ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ ಭಾರತ ಬ್ಯಾಡ್ಮಿಂಟನ್ ತಂಡ ಗ್ಲಾಸ್ಗೋಗೆ ಪ್ರಯಾಣ ಬೆಳೆಸಬೇಕಿತ್ತು, ಸೈನಾ ಅವರಿಗೆ ಟಿಕೆಟ್ ಸಿದ್ಧವಾಗಿತ್ತು. ಆದರೆ ಸೈನಾ ಅವರು ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಯೂರೋಪ್ಗೆ ತೆರಳಲಿಲ್ಲ.
2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದ ಸೈನಾ ನೆಹ್ವಾಲ್, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದರು. ಅಲ್ಲದೆ ಸೈನಾ, ಕ್ರೀಡಾಕೂಟದಲ್ಲಿ ಪದಕದ ನಿರೀಕ್ಷೆ ಹೊಂದಬಹುದಾಗಿದ್ದ ಪ್ರಮುಖ ಆಟಗಾರ್ತಿಯಾಗಿದ್ದು, ಇವರ ಅಲಭ್ಯತೆ ಭಾರತಕ್ಕೆ ಹಿನ್ನಡೆಯುಂಟು ಮಾಡಿದೆ.
ಇದು ಅತ್ಯಂತ ಕಠಿಣ ನಿರ್ಧಾರವಾಗಿದ್ದು, ಅಷ್ಟೇ ಮಹತ್ವದ್ದಾಗಿದೆ ಎಂದು ಸೈನಾ ನೆಹ್ವಾಲ್ ನಿರಾಸೆಯಿಂದ ಉತ್ತರಿಸಿದ್ದಾರೆ.
ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಮರಳಿದ ನಂತರ ಭಾರತದ ಬ್ಯಾಡ್ಮಿಂಟನ್ ತಾರೆ ಮಂಡಿ ನೋವಿನಿಂದಲು ಬಳಲುತ್ತಿದ್ದ ಕಾರಣ ಹೆಚ್ಚು ಕೋರ್ಟ್ಗೆ ಇಳಿಯಲಿಲ್ಲ.
ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮೊದಲ ಸುತ್ತಿನ ವೇಳೆ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ್ದೆ. ಆದರೂ ಸಹ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದೆ. ಅಲ್ಲಿಂದ ಮರಳಿದ ನಂತರ ನನಗೆ ಎರಡೂವರೆ ವಾರಗಳ ಕಾಲ ಸಮಯಾವಕಾಶವಿತ್ತು. ನಾನು ವಿಶ್ರಾಂತಿ ತೆಗೆದುಕೊಂಡು, ಸರಿಯಾಗಿ ತಯಾರಿ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ಇದು ತೀವ್ರ ಬೇಸರದ ನಿರ್ಧಾರವಾಗಿದೆ ಎಂದು ಸೈನಾ ಮಾಹಿತಿ ನೀಡಿದ್ದಾರೆ.
ನಾನು ಅಭ್ಯಾಸ ನಡೆಸಿ ಪಂದ್ಯಾವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೆ. ಆದರೆ ಸಂಪೂರ್ಣವಾಗಿ ಗುಣಮುಖವಾಗದ ಹಿನ್ನೆಲೆಯಲ್ಲಿ ಗಾಯದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಋತುವಿನ ಉಳಿದ ಪಂದ್ಯಾವಳಿಗೆ ಫಿಟ್ ಆಗಿರಲು ಇಚ್ಛಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಟೂರ್ನಿಗಳು ಬರಲಿವೆ. ಆ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.