ಪದಕದ ಆಸೆ ಹೊತ್ತು ಗ್ಲಾಸ್ಗೋಗೆ ಹಾರಿದ ದೀಪಿಕಾ ಪಳ್ಳಿಕಲ್
ನವದೆಹಲಿ: ಅನಾರೋಗ್ಯದ ಕಾರಣ ತವರಿನಲ್ಲಿಯೇ ನಡೆದ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದು ಭಾರಿ ನೋವನುಭವಿಸಿದ್ದ ದೀಪಿಕಾ ಪಳ್ಳಿಕಲ್ ಈ ಬಾರಿ ಸಿಕ್ಕ ಅವಕಾಶದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಲೇಬೇಕೆಂದು ಪಣತೊಟ್ಟು ಸ್ಕಾಟ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಗ್ಲಾಸ್ಗೋದಲ್ಲಿ ಇದೇ 23ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೀಪಿಕಾ, ಸ್ಕ್ವಾಶ್ ಸ್ಪರ್ಧೆಯಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಈ ಮೂರೂ ವಿಭಾಗಗಳಿಂದಲೂ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಒಡ್ಡಲಿದ್ದಾರೆ.
ವಿಶ್ವ ಸ್ಕ್ವಾಶ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಹೊಂದಿರುವ 22ರ ದೀಪಿಕಾ, ಶುಕ್ರವಾರ ಗ್ಲಾಸ್ಗೋಗೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ಪದಕಗಳನ್ನು ಗೆದ್ದುಕೊಳ್ಳುವಲ್ಲಿ ತಾವು ನೆರವಾಗುವುದಾಗಿ ವಿಶ್ವಾಸದಿಂದ ನುಡಿದರು. ಹೊಸದಿಲ್ಲಿಯಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತಗೊಂಡಿದ್ದು ಭಾರಿ ಬೇಸರ ತರಿಸಿದೆ. ಈಗ ಇದು ನನಗೆ ಮೊದಲ ಪಂದ್ಯಾವಳಿಯಾಗಿದ್ದು, ಎಲ್ಲ ಮೂರು ವಿಭಾಗಗಳಲ್ಲಿ ಪದಕ ಗೆದ್ದುಕೊಳ್ಳುವ ಅವಕಾಶವಿದೆ ಎಂದರು.
ಪ್ರಮುಖವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಮಲೇಷಿಯಾ ಆಟಗಾರ್ತಿಯರಿಂದ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ. ಪದಕ ಗೆಲ್ಲುವ ಆಸೆ ನನಸು ಮಾಡಿಕೊಳ್ಳಬೇಕಾದರೆ, ಕನಿಷ್ಠ ನಾಲ್ವರು ಅಗ್ರಮಾನ್ಯ ಆಟಗಾರ್ತಿಯರನ್ನಾದರೂ ಸೋಲಿಸಬೇಕಾಗಿದೆ ಎಂದು ದೀಪಿಕಾ ಪಳ್ಳಿಕಲ್ ಹೇಳಿದರು.