ಕ್ರೀಡೆ

ಬೆಂಜೆಮಾ ಸಂಭ್ರಮ

Rashmi Kasaragodu

ಭರ್ಜರಿ ಒಂದು ತಿಂಗಳು ನಡೆಯಿತಲ್ಲ ಫಿಫಾ ವಿಶ್ವಕಪ್... ಇದರಲ್ಲಿ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಆಟಗಾರನಾರು? ಮೆಸ್ಸಿ, ನೇಮಾರ್, ರೋಡ್ರಿಗಸ್... ಇರಬಹುದು. ಆದರೆ, ಫ್ರಾನ್ಸ್‌ನ ಕರೀಂ ಬೆಂಜೆಮಾ ಇವರೆಲ್ಲರಿಗಿಂತ ಮೊದಲೇ ಮುಂದಿದ್ದರು!
ಕ್ವಾರ್ಟರ್‌ಫೈನಲ್ ಪಂದ್ಯ ಮುಕ್ತಾಯವಾದರೂ, ಕ್ಯಾಸ್ಟ್ರಾಲ್ ಇಂಡೆಕ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರು ಬೆಂಜೆಮಾ. ಆದರೆ, ಫ್ರಾನ್ಸ್ ತಂಡ ಮುಗ್ಗರಿಸಿದ ಕೂಡಲೇ ಇವರ ರ್ಯಾಂಕಿಂಗ್ ಕೂಡ ತಗ್ಗಿತು.
ಬೆಂಜೆಮಾ ಆಟ ಚೆಂದ
ಫ್ರಾನ್ಸ್‌ನ ಸ್ಟ್ರೈಕರ್ ಕರೀಂ ಬೆಂಜೆಮಾ ಪಂದ್ಯದಲ್ಲಿದ್ದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹ. ಎದುರಾಳಿ ಆಟಗಾರ ಗೋಲು ಗಳಿಸಿದರೂ, ಬೆಂಜೆಮಾ ಮುಖದಲ್ಲಿ ಬೇಸರ ಮೂಡುವುದಿಲ್ಲ. ಬದಲಾಗಿ ಕ್ರೀಡಾ ಮನೋಭಾವ ಉಕ್ಕುತ್ತದೆ. ಹಾಗಾಗಿಯೇ ಅಭಿಮಾನಿಗಳಿಗೆ ಬೆಂಜೆಮಾ ಎಂದರೆ, ಎಲ್ಲಿಲ್ಲದ ಸಂತಸ. ಅವರು ಮೈದಾನಕ್ಕಿಳಿದರೆ ಅದೇನೋ ಕಳೆ.
ಚೆಂಡನ್ನು ಪಾಸ್ ಮಾಡಲಿ, ಎದುರಾಳಿ ಆಟಗಾರನನ್ನು ಕಟ್ಟಿಹಾಕಲಿ, ತಾವು ಗೋಲು ಗಳಿಸಲು ಅಥವಾ ಎದುರಾಳಿ ಆಟಗಾರ ಗೋಲು ತನ್ನದಾಗಿಸಿಕೊಳ್ಳಲಿ ಬೆಂಜೆಮಾ ಯಾವತ್ತೂ ಹುಮ್ಮಸ್ಸಿನ ಆಟಗಾರನಾಗಿಯೇ ಇರುತ್ತಾರೆ.
ಇವರು ರಿಯಲ್ ಮ್ಯಾಡ್ರಿಡ್‌ನ ಮುನ್ನಡೆ ಆಟಗಾರನೂ ಹೌದು. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹೊಂಡುರಾಸ್ ವಿರುದ್ಧ ಫ್ರಾನ್ಸ್ 3-0 ಗೋಲುಗಳಿಂದ ಗೆದ್ದಾಗ, ಎರಡು ಗೋಲು ದಾಖಲಿಸುವ ಮೂಲಕ ಬೆಂಜೆಮಾ ಮತ್ತೆ ಹೀರೋ ಆಗಿದ್ದರು. ಸ್ವಿಜರ್ಲೆಂಡ್ ವಿರುದ್ಧ 5-2 ಗೋಲುಗಳಿಂದ ಗೆದ್ದಾಗ ಅದರಲ್ಲಿ ಒಂದು ಪಾಲನ್ನು ಹೊಂದಿದ್ದರು.
ಆದರೆ, ನಂತರದ ಮೂರು ಪಂದ್ಯಗಳಲ್ಲಿ ಈಕ್ವೆಡಾರ್, ನೈಜಿರಿಯಾ ಹಾಗೂ ಜರ್ಮನಿ ವಿರುದ್ಧ ಅವರು ಗೋಲು ದಾಖಲಿಸುವಲ್ಲಿ ವಿಫಲವಾದರೂ, ಅಭಿಮಾನಿಗಳ ಮನದಲ್ಲಿ ಮಾತ್ರ ಸದಾ ಉಳಿದಿದ್ದಾರೆ ಕರೀಂ.

SCROLL FOR NEXT