ಮುಂದಿನ ತಿಂಗಳು ಕೆಪಿಎಲ್
ಬೆಂಗಳೂರು: ಆರಂಭಿಕ ಎರಡು ಆವೃತ್ತಿಗಳ ನಂತರ ಸ್ಥಗಿತಗೊಂಡಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿ ಮತ್ತೆ ಜೀವ ಪಡೆದುಕೊಂಡಿದ್ದು, ಆಗಸ್ಟ್‌ನಿಂದ ಸೆಪ್ಟೆಂಬರ್‌ನಲ್ಲಿ 3ನೇ ಆವೃತ್ತಿಯನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.
ಶುಕ್ರವಾರ ಈ ವಿಷಯವನ್ನು ಪ್ರಕಟಿಸಿದ ಕೆಎಸ್‌ಸಿಎ ಅಧ್ಯಕ್ಷ ಬ್ರಿಜೇಶ್ ಪಟೇಲ್, ಪಂದ್ಯಾವಳಿಗೆ ಫ್ರಾಂಚೈಸಿಗಳ ಬಿಡ್ಡಿಂಗ್ ಅನ್ನು ಕರೆದಿದ್ದು, ಜು.22ರಂದು ಬಿಡ್ಡಿಂಗ್ ಅನ್ನು ಅಂತ್ಯಗೊಳಿಸಲಾಗುವುದು. ಅಂದೇ ಟೂರ್ನಿಯಲ್ಲಿ ಎಷ್ಟು ಫ್ರಾಂಚೈಸಿ ಹಾಗೂ ಯಾವ ಫ್ರಾಂಚೈಸಿಗಳು ಭಾಗವಹಿಸಲಿವೆ ಎಂಬ ಚಿತ್ರಣ ದೊರೆಯಲಿದೆ ಎಂದರು.
ಒಟ್ಟು 10 ಪ್ರದೇಶಗಳನ್ನು ಫ್ರಾಂಚೈಸಿಗಾಗಿ ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ 6-7 ತಂಡಗಳು ಆಯ್ಕೆಯಾಗಲಿವೆ. ಇದರ ಜತೆಗೆ ಎಲ್ಲಾ ಚಿತ್ರರಂಗದ ಸಿನಿಮಾ ತಾರೆಯರು ಸೇರಿದಂತೆ ಚಿತ್ರ ತಾರಾ ತಂಡವೊಂದು ಭಾಗವಹಿಸಲಿದ್ದು, ಈ ತಂಡವನ್ನು ನಟ ಸುದೀಪ್ ಅವರು ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಯಿತು.
ಇನ್ನು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯನ್ನು ಎ ಗುಂಪು ಹಾಗೂ ಬಿ ಗುಂಪು ಎಂದು ವಿಂಗಡಿಸಿ ಬಿಡ್ಡಿಂಗ್ ನಡೆಸಲಾಗುವುದು. ಈ ಪ್ರಕ್ರಿಯೆಯ ರೀತಿಯನ್ನು ಫ್ರಾಂಚೈಸಿಗಳು ಅಂತಿಮವಾದ ನಂತರ ನಿರ್ಧರಿಸಲಾಗುವುದು. ಈ ಪ್ರಕ್ರಿಯೆ ಜುಲೈ ತಿಂಗಳಾಂತ್ಯದಲ್ಲಿ ನಡೆಯುವ ಸಾಧ್ಯತೆ ಇದೆ.
ಈ ಟೂರ್ನಿಯ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಹುಬ್ಬಳ್ಳಿಯ ರಾಜ್‌ನಗರ್ ಮೈದಾನ, ಮೈಸೂರಿನ ಗಂಗೋತ್ರಿ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.