ವಿಶ್ವಕಪ್ ವಿಜೇತ ಜರ್ಮನಿ ನಾಯಕ ಫಿಲಿಪ್ ಲ್ಯಾಮ್ ವಿದಾಯ
ಬರ್ಲಿನ್: ವಿಶ್ವಕಪ್ ಗೆಲವಿನ ರೂವಾರಿ ಜರ್ಮನಿ ತಂಡದ ನಾಯಕ ಫಿಲಿಪ್ ಲ್ಯಾಮ್ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಿದ್ದಾರೆ. ಲ್ಯಾಮ್ ಅವರ ಏಜೆಂಟ್ ಸುದ್ದಿಸಂಸ್ಥೆಗೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬ್ರೆಜಿಲ್ನ ಮಾರಕಾನದಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ತಮ್ಮ ತಂಡದ ಪರ ಮಾರಿಯೊ ಗೋಟ್ಜೆ ಗೋಲು ದಾಖಲಿಸಿ ಚಾಂಪಿಯನ್ಪಟ್ಟ ದೊರಕಿಸಿಕೊಟ್ಟನಂತರ ಲ್ಯಾಮ್ ಅವರು ದಿಢೀರನೆ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದರು.
ಬೇಯರ್ನ್ ಮ್ಯುನಿಚ್ನ ರಕ್ಷಣಾ ಆಟಗಾರ 30ರ ಲ್ಯಾಮ್, ಜರ್ಮನಿ ಪರ 113 ಪಂದ್ಯಗಳನ್ನಾಡಿದ್ದು 5 ಗೋಲುಗಳನ್ನು ಸಂಪಾದಿಸಿದ್ದಾರೆ. ವಿಶ್ವಕಪ್ನಲ್ಲಿ ತಂಡಕ್ಕೆ ಯಾವುದೇ ಕಳಂಕ ಅಂಟದೇ ಚಾಂಪಿಯನ್ಪಟ್ಟ ದೊರಕಿಸಿಕೊಡುವಲ್ಲಿ ಸಮರ್ಥ ನಾಯಕತ್ವ ನಿರ್ವಹಿಸಿದ್ದು ಅವರ ಸಾಧನೆಗೆ ಮೂಡಿದ ಪ್ರಮುಖ ಗರಿಯಾಗಿದೆ.
ವಿಶ್ವಕಪ್ ದಕ್ಕಿಸಿಕೊಂಡ ನಂತರ ವಿದಾಯದ ಘೋಷಣೆ ಮಾಡುವುದು ಸೂಕ್ತ ಸಮಯವಾಗಿದೆ. ಬ್ರೆಜಿಲ್ ವಿಶ್ವಕಪ್ ನನ್ನ ಅಂತಿಮ ಟೂರ್ನಿ ಎಂದು ಮೊದಲೇ ನಿರ್ಧರಿಸಿದ್ದೆ. ಈಗ ಮಹತ್ಸಾಧನೆಯೊಂದಿಗೆ ಜರ್ಮನಿ ಫುಟ್ಬಾಲ್ ಒಕ್ಕೂಟದಿಂದ ಗೌರವದ ವಿದಾಯ ಕಾಣಲು ಇದೇ ಸರಿಯಾದ ಸಂದರ್ಭವಾಗಿದೆ ಎಂದು ಲ್ಯಾಮ್ರನ್ನು ಉಲ್ಲೇಖಿಸಿ ಅವರ ಏಜೆಂಟ್ ರೋಮನ್ ಗ್ರಿಲ್ ಹೇಳಿದ್ದಾರೆ.
ಜರ್ಮನಿಗೆ ವಿಶ್ವಕಪ್ ಗೆದ್ದುಕೊಟ್ಟ ನಾಲ್ಕನೇ ನಾಯಕ ಲ್ಯಾಮ್ ಅವರಾಗಿದ್ದಾರೆ. ಈ ಮುನ್ನ ಫ್ರಿಜ್ ವಾಲ್ಟರ್ (1954), ಫ್ರಾಂಜ್ ಬೆಕೆನ್ಬಯೂರ್ (1974) ಮತ್ತು ಲೋಥಾರ್ ಮ್ಯಾಥೌಸ್ (1990) ಅವರು ತಮ್ಮ ಸಾರಥ್ಯದಲ್ಲಿ ಜರ್ಮನಿ ತಂಡಕ್ಕೆ ವಿಶ್ವಕಪ್ ಮುಕುಟ ದೊರಕಿಸಿಕೊಟ್ಟಿದ್ದರು.
ಹೀರೊ ಮೋಟಾರ್ಸ್ಗೆ ಐಎಸ್ಎಲ್ ಶೀರ್ಷಿಕೆ ಹಕ್ಕು
ನವದೆಹಲಿ: ಬಹು ನಿರೀಕ್ಷಿತ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ದೇಶದ ಖ್ಯಾತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟಾರ್ಸ್ ಪಾಲಾಗಿದೆ.
ಐಎಸ್ಎಲ್ ಜತೆಗೆ ಹೀರೊ ಮೊಟರ್ಸ್ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನು ಮಹತ್ವದ ಟೂರ್ನಿಯನ್ನು ಐಎಮ್ಜಿ ರಿಲಯನ್ಸ್ ಹಾಗೂ ಸ್ಟಾರ್ ಇಂಡಿಯಾ ಪ್ರಚಾರ ಮಾಡಲಿದ್ದು, ಪಂದ್ಯಾವಳಿಯನ್ನು ಹೀರೊ ಇಂಡಿಯನ್ ಸೂಪರ್ ಲೀಗ್ ಎಂದು ಕರೆಯಲಾಗುವುದು.
ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯು ವಿಶ್ವದ ಖ್ಯಾತ ಕ್ರೀಡೆಗಳಲ್ಲಿ ಒಂದಾಗಿದ್ದು, ದೇಶದ ಮೂಲೆ ಮೂಲೆಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ಐಎಸ್ಎಲ್ ಜತೆಗಿನ ಒಪ್ಪಂದದ ನಂತರ ಮಾತನಾಡಿದ ಹೀರೊ ಮೋಟಾರ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಮುಂಜಲ್ ತಿಳಿಸಿದ್ದಾರೆ.
ಬೆಂಗ್ಳೂರಲ್ಲಿ ತಾಂತ್ರಿಕ ಸಮಿತಿ ಸಭೆ
ನವದೆಹಲಿ: 2017ರ 17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್ಗೆ ಸಂಬಂಧಿಸಿದಂತೆ ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ ವಿಷೇಶ ತಾಂತ್ರಿಕ ಸಮಿತಿಯು ತನ್ನ ಪರಿಶೀಲನೆ ನಡೆಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಿದೆ.
ಶನಿವಾರ ಈ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ, ಹಾಲಿ ನಾಯಕ ಸುನಿಲ್ ಛೆಟ್ರಿ ಹಾಗೂ ಸಲ್ಗಾಂವಕರ್ ಎಫ್ಸಿ ತಂಡದ ಕೋಚ್ ಡೆರ್ರಿಕ್ ಪೆರೇರಾ ಸಭೆ ನಡೆಸಲಿದ್ದಾರೆ. ತ
ಾಂತ್ರಿಕ ಸಮಿತಿಯ ಸದಸ್ಯರ ಜತೆಗೆ ಎಐಎಫ್ಎಫ್ ತಾಂತ್ರಿಕ ನಿರ್ದೇಶಕರಾದ ರಾಬರ್ಟ್ ಬಾನ್, ರಾಷ್ಟ್ರೀಯ ತಂಡದ ಕೋಚ್ ವಿಮ್ ಕೊವರ್ಮನ್ಸ್ ಮತ್ತು ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ 17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್ಗೆ ಭಾರತ ತಂಡದ ಬೆಳವಣಿಗೆ ಹಾಗೂ ಪ್ರಕ್ರಿಯೆ ಬಗ್ಗೆ ಚರ್ಚಿಸಲಾಗುವುದು.
ಹಂಗಾಮಿ ಹೊಣೆಯಿಂದ ಸನ್ನಿಗೆ ಮುಕ್ತಿ
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣ ತನಿಖೆಯಲ್ಲಿ ಎನ್.ಶ್ರೀನಿವಾಸನ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಐಪಿಎಲ್ಗೆ ಸಂಬಂಧ ಪಟ್ಟಂತೆ ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಿದ್ದ ಸುಪ್ರೀಂ ಕೋರ್ಟ್ ಶುಕ್ರವಾರ ಅವರನ್ನು ಅಧಿಕಾರದಿಂದ ಮುಕ್ತಗೊಳಿಸಿದೆ.
ಶ್ರೀನಿವಾಸನ್ ವಿರುದ್ಧ ಸುಪ್ರೀಂ ಕೋರ್ಟ್ ನೇಮಿತ ಮುಕುಲ್ ಮುದ್ಗಲ್ ಸಮಿತಿ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿತ್ತು. ನಂತರ ಐಪಿಎಲ್ಗೆ ಸಂಬಂಧ ಪಟ್ಟಂತೆ ಬಿಸಿಸಿಐನ ಹಂಗಾಮಿ ಅಧ್ಯಕ್ಷರನ್ನಾಗಿ ಸುನಿಲ್ ಗವಾಸ್ಕರ್ ಅವರನ್ನು ಹಾಗೆಯೇ, ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಶಿವಲಾಲ್ ಯಾದವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿತ್ತು.
ಕಳೆದವಾರ ಗಾವಸ್ಕರ್ ಅವರು ತಮ್ಮ ಸ್ಥಾನದ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿಸಲ್ಲಿಸಿದ್ದರು. ಹಾಗಾಗಿ ಸುಪ್ರೀಂ ಕೋರ್ಟ್ನ ಪ್ರಕರಣದ ತನಿಖೆ ನಡೆಸಲು ನೇಮಿಸಲಾಗಿರುವ ನ್ಯಾ.ಇಬ್ರಾಹಿಂ ಕಲಿಫುಲ್ಲಾ ಹಾಗೂ ಟಿ.ಎಸ್ ಟಾಖೂರ್ ಅವರ ನೂತನ ಪೀಠ ಗಾವಸ್ಕರ್ರನ್ನು ಬಿಸಿಸಿಐ ಅಧಿಕಾರದಿಂದ ಮುಕ್ತಿಗೊಳಿಸಿದೆ.
ಸೂಪರ್ ಓವರ್ನಲ್ಲಿ ಮೇಡನ್ ವಿಕೆಟ್
ಗಯಾನ: ಟಿ20 ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಬೌಲರ್ ವಿಕೆಟ್ ಪಡೆದು ಮೇಡನ್ ಓವರ್ ಮಾಡುವುದು ಅಚ್ಚರಿಯೇ ಸರಿ. ಈ ಚಮತ್ಕಾರಿ ಪ್ರಧರ್ಶನವನ್ನು ವಿಂಡೀಸ್ನ ಸುನಿಲ್ ನಾರಾಯಣ್ ಮಾಡಿದ್ದಾರೆ.
ಪ್ರಸ್ತುತ ಕೆರಿಬಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಗುಯಾನ ಅಮೇಜಾನ್ ವಾರಿಯರ್ಸ್ ಹಾಗೂ ರೆಡ್ ಸ್ಟೀಲ್ ತಂಡಗಳ ನಡುವಣ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರೆಡ್ ಸ್ಟೀಲ್ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 118 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಗುಹಾನ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ 118 ರನ್ ಗಳಿಸಿತು. ನಂತರ ಸೂಪರ್ ಓವರ್ನಲ್ಲಿ ಗುಹಾನ ಮೊದಲು ಬ್ಯಾಟಿಂಗ್ ನಡೆಸಿ 1 ವಿಕೆಟ್ ಕಳೆದುಕೊಂಡು 11 ರನ್ಗಳನ್ನಷ್ಟೇ ದಾಖಲಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ರೆಡ್ ಸ್ಟೀಲ್ ತಂಡ 1 ವಿಕೆಟ್ ಕಳೆದುಕೊಂಡಿತಾದರೂ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಾರಾಯಣ್ ಈ ಓವರ್ನ 5ನೇ ಎಸೆತದಲ್ಲಿ ವಿಕೆಟ್ ಕಬಳಿಸಿದ್ದು, ಉಳಿದ ಎಸೆತಗಳಲ್ಲಿ ರನ್ ದಾಖಲಾಗಲಿಲ್ಲ.