ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಸರೆಯಾದ ಮುರಳಿ ವಿಜಯ್

ಮಧ್ಯಮ ವೇಗದ ಬೌಲರ್ ಭುವನೇಶ್ವರ ಕುಮಾರರ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನದ ನೆರವಿನಿಂದ...

Vishwanath S
Updated On : 20 Jul 2014, 1:10 am

ಲಾರ್ಡ್ಸ್: ಸತತವಾಗಿ ಮೂರು ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ ಭಾರತಕ್ಕೆ, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ ಅರ್ಧ ಶತಕ ದಾಖಲಿಸಿದ ಮುರಳಿ ವಿಜಯ್ (ಅಜೇಯ 59) ಆಸರೆಯಾದರು.
ಇದರೊಂದಿಗೆ ಭಾರತ 2ನೇ ಇನಿಂಗ್ಸ್ನಲ್ಲಿ 145 ರನ್ ಮುನ್ನಡೆ ಪಡೆದುಕೊಳ್ಳುವುದರೊಂದಿಗೆ, ಎರಡನೇ ಟೆಸ್ಟ್ ಪಂದ್ಯ ಕುತೂಹಲದ ಘಟ್ಟ ತಲುಪಿದೆ. ಆರಂಭಿಕರಾದ ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ (43) ಮೊದಲ ವಿಕೆಟ್ ಜತೆಯಾಟದಲ್ಲಿ 78 ರನ್ ಕಲೆ ಹಾಕಿದ್ದು, 3ನೇ ದಿನಾಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲು ಸಾಧ್ಯವಾಯಿತು.
ಅಂತ್ಯದಲ್ಲಿ ವಿಜಯ್ಗೆ ಸಾಥ್ ನೀಡುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ (12) ಕ್ರೀಸ್ನಲ್ಲಿದ್ದರು. ಇಬ್ಬರ ಜತೆಯಾಟದಲ್ಲಿ ಮುರಿಯದ 5ನೇ ವಿಕೆಟ್ಗೆ 46 ರನ್ ಪೇರಿಸಿದರು. ಕ್ರೀಸ್ಗೆ ಕಚ್ಚಿ ನಿಂತುಕೊಂಡು 190 ಎಸೆತಗಳನ್ನು ಎದುರಿಸಿದ ವಿಜಯ್ ಅರ್ಧ ಶತಕದಲ್ಲಿ 7 ಬೌಂಡರಿಗಳು ಸೇರಿದ್ದವು. ಈಗ ಭಾರತ ಆತಿಥೇಯರಿಗೆ 250ಕ್ಕೂ ಹೆಚ್ಚು ರನ್ ಗುರಿ ನೀಡಲು ಎದುರು ನೋಡುತ್ತಿದೆ.
ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾಗಿದ್ದ ಅಜಿಂಕ್ಯ ರಹಾನೆ ಅವರು ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಪ್ರಯಾರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರುವ ಮೂಲಕ ನಿರಾಸೆ ಮೂಡಿಸಿದರು.
ಇನ್ನ್ನು ಭಾರತದ ಭರವಸೆಯ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಸತತವಾಗಿ ನಾಲ್ಕನೇ ಇನಿಂಗ್ಸ್ನಲ್ಲೂ ತಂಡಕ್ಕೆ ಆಸರೆಯಾಗಲಿಲ್ಲ. ಕ್ರೀಸ್ಗೆ ಹೆಜ್ಜೆ ಇಡುತ್ತಿದ್ದಂತೆಯೇ ಪ್ಲಂಕೆಟ್ ಬೌಲಿಂಗ್ನಲ್ಲಿ ಬೌಲ್ಡ್ ಆದ ಕೊಹ್ಲಿ (0) ಶೂನ್ಯ ಸುತ್ತುವುದರೊಂದಿಗೆ ಕಾಲ್ಕಿತ್ತರು.
ಉತ್ತಮ ಬ್ಯಾಟಿಂಗ್ ಬೀಸುತ್ತಿದ್ದ ಶಿಖರ್ ಧವನ್ (31) ಬೆನ್ ಸ್ಟೋಕ್ಸ್ ಎಸೆತದಲ್ಲಿ ಜಾಯ್ ರೂಟ್ಗೆ ಕ್ಯಾಚ್ ನೀಡಿದರೆ, ಚೇತೇಶ್ವರ ಪೂಜಾರ ಪ್ಲೆಂಕಟ್ ಬೌಲಿಂಗ್ನಲ್ಲಿ ಪ್ರಯಾರ್ಗೆ ಕ್ಯಾಚ್ ನೀಡಿದರು.
ಇಂಗ್ಲೆಂಡ್ ಪರ ಆಕರ್ಷಕ ಬೌಲಿಂಗ್ ಮಾಡಿದ ಲಿಯಾಮ್ ಪ್ಲಂಕೆಟ್ 2 ವಿಕೆಟ್ ಕಬಳಿಸಿದರೆ, ಸ್ಟುವರ್ಟ್ ಬ್ರಾಡ್ ಮತ್ತು ಬೆನ್ ಸ್ಟೋಕ್ಸ್ ಅವರು ತಲಾ 1 ವಿಕೆಟ್ ಪಡೆದರು.
ಭುವಿಯಾಟ: ಇದಕ್ಕೂ ಮುನ್ನ್ನ ಮಧ್ಯಮ ವೇಗದ ಬೌಲರ್ ಭುವನೇಶ್ವರ ಕುಮಾರರ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸುವುದಕ್ಕೆ ತಡೆಹಾಕಿತು. ಆದರೂ, ಆತಿಥೇಯ ಇಂಗ್ಲೆಂಡ್ ಆಟಗಾರರು ಮಧ್ಯಮ ಕ್ರಮಾಂಕದ ದಾಂಡಿಗ ಲಿಯಮ್ ಪ್ಲಂಕೆಟ್ರ (ಅಜೇಯ 55, 79 ಎಸೆತ, 8 ಬೌಂಡರಿ) ಸಮಯೋಚಿತ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 24 ರನ್ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಭುವನೇಶ್ವರ ಶ್ರೇಷ್ಠ ದಾಳಿ: ಇಂಗ್ಲೆಂಡ್ ತಂಡ 6 ವಿಕೆಟ್ಗೆ 219 ರನ್ಗಳ ಮೊತ್ತದೊಂದಿಗೆ ಮೂರನೇ ದಿನದಾಟ ಮುಂದುವರಿಸಿ ಮತ್ತೆ 100 ರನ್ ಗಳಿಸುವಷ್ಟರಲ್ಲಿ ಕೊನೆಯ 4 ವಿಕೆಟ್ ಕಳೆದುಕೊಂಡು ಮೊದಲ ಇನಿಂಗ್ಸ್ ಪೂರೈಸಿತು. ಆದರೂ ಸಹ ಭಾರತದ ಮೊದಲ ಸರದಿಯ 295 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ 319 ರನ್ ಸಂಪಾದಿಸಿ ತನ್ನ ಪ್ರಭುತ್ವ ಸ್ಥಾಪಿಸಿತು.
ಒಂದು ಹಂತದಲ್ಲಿ ಇಂಗ್ಲೆಂಡ್ 9 ವಿಕೆಟ್ಗೆ 280 ರನ್ಗಳಿಸಿದಾಗ ಭಾರತಕ್ಕೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಪಡೆಯುವ ಅವಕಾಶವಿತ್ತು. ಆದರೆ, ಪ್ಲಂಕೆಟ್ ಮತ್ತು ಆ್ಯಂಡರ್ಸನ್ ಕೊನೆಯ ವಿಕೆಟ್ಗೆ 39 ರನ್ ಪೇರಿಸಿ ಭಾರತೀಯರನ್ನು ನಿರಾಶೆಗೊಳಿಸಿತು. ಪ್ರಮುಖವಾಗಿ ಪ್ಲಂಕೆಟ್ರನ್ನು ಬೇಗನೆ ಔಟ್ ಮಾಡದೇ ಇದ್ದುದು ಮಹೀ ಪಡೆಗೆ ದುಬಾರಿಯಾಯಿತು.
ಭಾರತದ ಪರ ಕರಾರುವಾಕ್ ದಾಳಿ ನಡೆಸಿದ ಭುವನೇಶ್ವರ ಕುಮಾರ್ 82 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಇನಿಂಗ್ಸ್ವೊಂದರಲ್ಲಿ ಜೀವನಶ್ರೇಷ್ಠ ಸಾಧನೆಗೆ ಭಾಜನರಾದರು. ಈ ಮುನ್ನ ಇದೇ ಸರಣಿಯಲ್ಲಿ ನಾಟಿಂಗ್ಹ್ಯಾಮ್ ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಉತ್ತರಪ್ರದೇಶದ ಭುವನೇಶ್ವರ 82 ರನ್ಗಳಿಗೆ 6 ವಿಕೆಟ್ ಪಡೆದಿದ್ದು ಶ್ರೇಷ್ಠ ಸಾಧನೆಯಾಗಿತ್ತು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 295
ಇಂಗ್ಲೆಂಡ್ ಮೊದಲ ಇನಿಂಗ್ಸ್ 105.5 ಓವರುಗಳಲ್ಲಿ 319     (2ನೇ ದಿನ 6ಕ್ಕೆ 219ರಿಂದ ಮುಂದುವರಿದಿದೆ)
ಲಿಯಮ್ ಪ್ಲಂಕೆಟ್ ಅಜೇಯ 55, ಮ್ಯಾಟ್ ಪ್ರಯರ್ ಸಿ ಧವನ್ ಬಿ ಶಮಿ 23, ಬೆನ್ ಸ್ಟೋಕ್ಸ್ ಬಿ ಭುವನೇಶ್ವರ 0, ಸ್ಟುವರ್ಟ್ ಬ್ರಾಡ್ ಸಿ ಧವನ್ ಬಿ ಭುವನೇಶ್ವರ 4, ಜೇಮ್ಸ್ ಆ್ಯಂಡರ್ಸನ್ ಸಿ ರಹಾನೆ ಬಿ ಜಡೇಜಾ 19. ಇತರೆ: (ಬೈ-5, ಲೆಗ್‌ಬೈ-10, ವೈಡ್-2, ನೋಬಾಲ್-3) 20.
ವಿಕೆಟ್ ಪತನ: 1-22, 2-31, 3-70, 4-113, 5-211, 6-214, 7-265, 8-276, 9-280, 10-319.
ಬೌಲಿಂಗ್ ವಿವರ: ಭುವನೇಶ್ವರ ಕುಮಾರ್ 31-10-82-6, ಮೊಹಮ್ಮದ್ ಶಮಿ 19-5-58-1, ಇಶಾಂತ್ ಶರ್ಮಾ 24-5-61-0, ಸ್ಟುವರ್ಟ್ ಬಿನ್ನಿ 10-0-45-0, ರವೀಂದ್ರ ಜಡೇಜಾ 18.5-1-46-2, ಮುರಳಿ ವಿಜಯ್ 3-0-12-1.
ಭಾರತ ಎರಡನೇ ಇನಿಂಗ್ಸ್ 63 ಓವರುಗಳಲ್ಲಿ 4ವಿಕೆಟ್‌ಗೆ 169
(3ನೇ ದಿನಾಂತ್ಯ)
ಮುರಳಿ ವಿಜಯ್ ಬ್ಯಾಟಿಂಗ್ 59, ಶಿಖರ್ ಧವನ್ ಸಿ ರೂಟ್ ಬಿ ಸ್ಟೋಕ್ಸ್ 31, ಚೇತೇಶ್ವರ ಪೂಜಾರ ಸಿ ಪ್ರಯಾರ್ ಬಿ ಪ್ಲಂಕೆಟ್ 43, ವಿರಾಟ್ ಕೊಹ್ಲಿ ಬಿ ಪ್ಲಂಕೆಟ್ (0), ಅಜಿಂಕ್ಯ ರಹಾನೆ  ಸಿ ಪ್ರಯಾರ್ ಬಿ ಬ್ರಾಡ್ (5), ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ 12,  ಇತರೆ: (ಬೈ-4, ಲೆಗ್‌ಬೈ-3) 7.
ವಿಕೆಟ್ ಪತನ: 1-40, 2-118, 3-118, 4-123.    ಬೌಲಿಂಗ್ ವಿವರ: ಆ್ಯಂಡರ್ಸನ್ 18-7-36-0, ಬ್ರಾಡ್ 14-5-41-1, ಸ್ಟೋಕ್ಸ್ 13-2-35-1, ಪ್ಲಂಕೆಟ್ 12-5-24-2, ಮೊಯೀನ್ ಅಲಿ 6-1-14-0.


'ಆಂಗ್ಲರಿಂದಲೇ ತಪ್ಪು ತಿದ್ದಿಕೊಂಡೆ'
ಲಂಡನ್: ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಆಂಗ್ಲ ಬೌಲರ್ಗಳು ಮಾಡಿದ ತಪ್ಪಿನಿಂದ ಪಾಠ ಕಲಿತದ್ದು, ನಾನು ಶ್ರೇಷ್ಠ ಪ್ರದರ್ಶನ ನೀಡಲು ನೆರವಾಯಿತು ಎಂದು ಭಾರತದ ಮಧ್ಯಮ ವೇಗಿ ಭುವನೇಶ್ವರ ಕುಮಾರ್ ತಿಳಿಸಿದ್ದಾರೆ.
'ಇಂಗ್ಲೆಂಡ್ ಬೌಲರ್ಗಳಿಂದ ನಾವು ಪಾಠ ಕಲಿತೆವು. ಮೊದಲ ದಿನ ಅವರು ಹೆಚ್ಚಿನ ರೀತಿಯಲ್ಲಿ ಶಾರ್ಟ್ ಬೌಲಿಂಗ್ ಮಾಡಿದರು. ಹೀಗಾಗಿ ಯಾವ ರೀತಿ ಲೆಂಥ್ ಬೌಲಿಂಗ್ ಮಾಡಬೇಕು ಎಂಬುದನ್ನು ನಾವು ಅವರಿಂದ ಕಲಿತೆವು' ಎಂದು ಭುವನೇಶ್ವರ ತಿಳಿಸಿದರು.  ಎರಡನೇ ಟೆಸ್ಟ್ನ 2ನೇ ದಿನ ಭುವನೇಶ್ವರ ಅವರು 46 ರನ್ ನೀಡಿ 4 ವಿಕೆಟ್ ಪಡೆದದ್ದು, ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 219 ರನ್ ಗಳಿಸಿತ್ತು. ಆದರೆ, ಶನಿವಾರವೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಭುವನೇಶ್ವರ ಒಟ್ಟು 82 ರನ್ ನೀಡಿ 6 ವಿಕೆಟ್ ಪಡೆದರು. 'ಇಂಗ್ಲೆಂಡ್ನಲ್ಲಿ ಬೌಲಿಂಗ್ ಮಾಡಲು ನಾನು ಖುಷಿಪಡುತ್ತೇನೆ. ಇದು ನನ್ನ ಉತ್ಸಾಹವನ್ನು ಇಮ್ಮಡಿಸಿದೆ' ಎಂದು ಭುವನೇಶ್ವರ ಕುಮಾರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement