ಕೊಚ್ಚಿ ತಂಡಕ್ಕೆ ಇಂಗ್ಲೆಂಡ್ ಮಾಜಿ ಆಟಗಾರ ಡೇವಿಡ್ ಜೇಮ್ಸ್?
ಕೊಚ್ಚಿ: ಮುಂಬರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ತಂಡಕ್ಕೆ ಇಂಗ್ಲೆಂಡ್ನ ಮಾಜಿ ಗೋಲ್ಕೀಪರ್ ಡೇವಿಡ್ ಜೇಮ್ಸ್ ಸೇರಿಕೊಳ್ಳಲಿದ್ದಾರೆ ಎಂದು ವದಂತಿಗಳು ಹರಡಿವೆ.
ಜೇಮ್ಸ್ ತಂಡ ಸೇರಿಕೊಳ್ಳುವ ಸುದ್ದಿಯನ್ನು, ತಂಡದ ಸಹ ಮಾಲೀಕರಾದ ಸಚಿನ್ ತೆಂಡೂಲ್ಕರ್ ಅವರೇ ಪ್ರಕಟಿಸಲಿ ಎಂದು ಕ್ಲಬ್ ಬಯಸಿದೆಯಂತೆ. ಜೇಮ್ಸ್ ಕ್ಲಬ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕುರಿತು ಖಿಚಿತಪಡಿಸದ ಮತ್ತು ನಿರಾಕರಿಸದ ಪಿವಿಪಿ ಸಮೂಹ ನಿರ್ದೇಶಕ ರಾಜೀವ್ ಕಮಿನೆನಿ, ಖ್ಯಾತ ಅಂತಾರಾಷ್ಟ್ರೀಯ ಆಟಗಾರನೊಬ್ಬ ಕೊಚ್ಚಿ ಫ್ರಾಂಚೈಸಿ ಸೇರಿಕೊಂಡಿದ್ದಾರೆ ಎಂದಿದ್ದಾರೆ. 'ಸಚಿನ್ ತೆಂಡೂಲ್ಕರ್ ಅವರು ಪ್ರಮುಖ ಆಟಗಾರನ ಹೆಸರನ್ನು ಪ್ರಕಟಿಸಲಿದ್ದಾರೆ. ನಾವು ಪ್ರಮುಖ ಆಟಗಾರನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಮಾತ್ರ ಈಗ ಹೇಳಬಲ್ಲೆ' ಎಂದಿದ್ದಾರೆ ಕಮಿನೆನಿ.
ಇಂಗ್ಲೆಂಡ್ ಪರ 53 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಮುನ್ನ ಲಿವರ್ಪೂಲ್ ಕ್ಲಬ್ನೊಂದಿಗೆ ಹೆಸರು ಮಾಡಿಕೊಂಡಿದ್ದ 43 ವರ್ಷದ ಜೇಮ್ಸ್ ಕೇರಳ ತಂಡ ಸೇರುತ್ತಿರುವ ಬಗ್ಗೆ ವರದಿಗಳು ಖಚಿತಪಡಿಸಿಲ್ಲ. ಆದರೆ, ಅವರು ಕೇರಳ ತಂಡದ ಆಟಗಾರ ಅಥವಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.