ಕ್ರಿಸ್ಟಿಯಾನೊ ರೊನಾಲ್ಡೊ ಹೊಟ್ಟೆಯಲ್ಲಿದ್ದಾಗ ಗರ್ಭಪಾತಕ್ಕೆ ಯತ್ನಿಸಿದ್ದ ತಾಯಿ
ಲಂಡನ್: ಪೊರ್ಚುಗಲ್ನ ಖ್ಯಾತ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಹೊಟ್ಟೆಯಲ್ಲಿದ್ದಾಗ ಅವರ ತಾಯಿ ಗರ್ಭಪಾತಕ್ಕೆ ಯತ್ನಿಸಿದ್ದರಂತೆ. ಹಾಗಂತಾ ರೊನಾಲ್ಡೊ ತಾಯಿ ಡೊಲೊರೆಸ್ ಅವೆಯಿರೊ ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ತಿಳಿಸಿದ್ದಾರೆ.
ಗರ್ಭಪಾತಕ್ಕಾಗಿ ಅವೆಯಿರೊ ವೈದ್ಯರ ಬಳಿ ತೆರಳಿದ್ದರಂತೆ. ಆದರೆ, ವೈದ್ಯರು ಅವರ ತೀರ್ಮಾನಕ್ಕೆ ಒಪ್ಪಲಿಲ್ಲವಂತೆ. ಹೀಗಾಗಿ, ವಾರ್ಮ್ ಬೀಯರ್ ಕುಡಿದು ಸಾಕಷ್ಟು ದೂರ ಓಡುವ ಮೂಲಕ ಗರ್ಭಪಾತಕ್ಕೆ ಯತ್ನಿಸಿದ್ದರಂತೆ. ಆ ಕುರಿತು 'ಮಾಯಿ ಕೊರಾಗೆಮ್' ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಅವರು ಬರೆದುಕೊಂಡಿದ್ದಾರೆ. 'ನಾನು ಗರ್ಭಪಾತಕ್ಕೆ ಯತ್ನಿಸಿದ್ದೆ. ಆದರೆ, ವೈದ್ಯರು ನನ್ನ ನೆರವಿಗೆ ಬರಲಿಲ್ಲ' ಎಂದು ಅವೆಯಿರೊ ತಾಯಿ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಪುಸ್ತಕವನ್ನು ಸರಣಿಯಾಗಿ ಪ್ರಕಟಿಸುತ್ತಿರುವ ಸ್ಪೇನ್ನ ಪತ್ರಿಕೆ ಲಾ ರಾಜೋನ್ ಮುದ್ರಿಸಿದೆ.
ರೊನಾಲ್ಡೊಗೂ ಗೊತ್ತಿರುವ ವಿಷಯ: ತನ್ನ ತಾಯಿ ತಾನು ಹೊಟ್ಟೆಯಲ್ಲಿದ್ದಾಗ ಗರ್ಭಪಾತಕ್ಕೆ ಯತ್ನಿಸಿದ್ದಳು ಎಂಬ ವಿಷಯ ರೊನಾಲ್ಡೊಗೂ ಗೊತ್ತಿದೆಯಂತೆ. 'ಅಮ್ಮಾ ನಾನು ಜನಿಸುವ ಮುನ್ನ ನಿನಗೆ ಬೇಡವಾಗಿದ್ದೆ.ಆದರೆ, ಈಗ ಮನೆಯಲ್ಲಿನ ಹಣಕಾಸಿನ ವ್ಯವಹಾರವನ್ನು ನಾನೇ ನಿಭಾಯಿಸುತ್ತಿದ್ದೇನೆ' ಎಂದು ಹೇಳಿರುವ ಕುರಿತೂ ಅವೆಯಿರೊ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರಂತೆ.