ಚೆಂಡು ವಿರೂಪ: ಫಿಲ್ಯಾಂಡರ್ಗೆ 75ರಷ್ಟು ದಂಡ
ಗಾಲೆ (ಶ್ರೀಲಂಕಾ): ಆಟದ ವೇಳೆ ಚೆಂಡು ವಿರೂಪಗೊಳಿಸಿದ ಆಪಾದನೆಗೆ ಗುರಿಯಾದ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ವೆರ್ನಾನ್ ಫಿಲ್ಯಾಂಡರ್ಗೆ ಪಂದ್ಯದ ಪ್ರತಿಶತ 75ರಷ್ಟು ದಂಡ ವಿಧಿಸಲಾಗಿದೆ.
ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ 3ನೇ ದಿನದಾಟದ ನಂತರ ಫಿಲ್ಯಾಂಡರ್ ಮೇಲೆ ಈ ದಂಡ ವಿಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೈದಾನದ ಅಂಪೈರ್ಗಳಾದ ಬಿಲ್ಲಿ ಬೌಡೆನ್ ಮತ್ತು ರಿಚರ್ಡ್ ಕೆಟಲ್ಬೋರೋ, 3ನೇ ಅಂಪೈರ್ ನಿಗೆಲ್ ಲಾಂಗ್, 4ನೇ ಅಂಪೈರ್ ರುಚಿರ ಪಾಲಿಯಾಗುರುಗೆ ಹಾಗೂ ಪಂದ್ಯದ ರೆಫರಿ ಜೆಫ್ ಕ್ರೋವ್ ಅವರು ಟಿವಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳನ್ನು ವೀಕ್ಷಿಸಿದ ನಂತರ 29ರ ಫಿಲ್ಯಾಂಡರ್ಗೆ ಈ ದಂಡ ಪ್ರಕಟಿಸಿದರು. ಚೆಂಡು ವಿರೂಪಗೊಳಿಸುವ ಆಪಾದನೆಗೆ ಸಂಬಂಧಿತ 42.3ರ ಕಾಯ್ದೆಯನ್ನು ಫಿಲ್ಯಾಂಡರ್ ಉಲ್ಲಂಘಿಸಿದ್ದಾರೆ. ಇದರನ್ವಯ ಐಸಿಸಿ ನೀತಿ ಸಂಹಿತೆಯ 2.2.9 ನೇ ಸ್ತರದ ಆಪಾದನೆ ಎಸಗಿದಂತಾಗಿದ್ದು, ಪಂದ್ಯದ ಪ್ರತಿಶತ 75ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ಹೇಳಿದೆ.
ಪಂದ್ಯ ನಡೆಯುತ್ತಿರುವ ವೇಳೆ ಕ್ಷೇತ್ರರಕ್ಷಣೆಯಲ್ಲಿ ತೊಡಗಿದ್ದ ದಕ್ಷಿಣ ಆಫ್ರಿಕಾ ಆಟಗಾರ ತನ್ನ ಕೈಬೆರಳು ಮತ್ತು ಹೆಬ್ಬೆಟ್ಟಿನ ಉಗುರುಗಳಿಂದ ಗೀರುತ್ತ ಅದರ ಸ್ವರೂಪ ಬದಲಾಯಿಸುತ್ತಿದ್ದರು. ಈ ದೃಶ್ಯವನ್ನು ಟಿವಿಯಲ್ಲಿ ಸೆರೆ ಹಿಡಿಯಲಾಗಿತ್ತು. ಪಂದ್ಯದ ನಂತರಇದನ್ನು ವೀಕ್ಷಿಸಿ ಖಚಿತಪಡಿಸಿಕೊಂಡ ನಂತರವಷ್ಟೇ ಮ್ಯಾಚ್ ರೆಫರಿ ಅವರು ಫಿಲ್ಯಾಂಡರ್ಗೆ ದಂಡ ನಿಗದಿಪಡಿಸಿದರು.