ಜಡೇಜಾ-ಆ್ಯಂಡರ್ಸನ್ ವ್ಯಾಜ್ಯದ ವಿಡಿಯೋ ಇಲ್ಲ
ಲಂಡನ್: ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ನಡೆದ ವ್ಯಾಜ್ಯ ಈಗ ಹೊಸ ತಿರುವು ಪಡೆದುಕೊಂಡಿದೆ. ಜಗಳದ ಕುರಿತು ಮಂಗಳವಾರ ಐಸಿಸಿ ಪ್ರಾಥಮಿಕ ತನಿಖೆ ನಡೆಸಲಿದೆ. ಆದರೆ, ಇಬ್ಬರ ನಡುವಿನ ವಿವಾದದ ಕುರಿತು ವಿಡಿಯೋ ಸಾಕ್ಷಿಯೇ ಇಲ್ಲದಿರುವುದು ಈಗ ಬೆಳಕಿಗೆ ಬಂದಿದೆ.
'ಜಡೇಜಾ ಮತ್ತು ಆ್ಯಂಡರ್ಸನ್ ನಡುವೆ ನಡೆದಿದೆ ಎನ್ನಲಾಗಿರುವ ಮಾತಿನ ಚಕಮಕಿ ಕುರಿತ ಮಹತ್ವದ ವಿಡಿಯೋ ಯಾಕೆ ಸಿಗುತ್ತಿಲ್ಲ ಎಂದು ಭಾರತೀಯ ಅಧಿಕಾರಿಗಳು ಕೇಳಿದ್ದಾರೆ'ಎಂದು ಅಂತರ್ಜಾಲ ತಾಣವೊಂದು ವರದಿ ಮಾಡಿದೆ.
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಭೋಜನ ವಿರಾಮದ ಸಮಯದಲ್ಲಿ ಘಟನೆ ನಡೆದಿತ್ತು. ಜಡೇಜಾ ಅವರನ್ನು ದೂಡಿ ಛೇಡಿಸಿದ ಆ್ಯಂಡರ್ಸನ್, ಮಾತಿನ ಕಲಹ ನಡೆಸಿದ್ದರು ಎನ್ನಲಾಗಿದೆ.
ಈ ಘಟನೆ ಕುರಿತು ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಆಸ್ಟ್ರೇಲಿಯಾದ ಗಾರ್ಡನ್ ಲಿವೀಸ್ ಅಧ್ಯಕ್ಷತೆಯಲ್ಲಿ ಟೆಲಿಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರೂ ಆಟಗಾರರಿಗೆ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಲಾಗಿದೆ. ಅಲ್ಲದೇ, ಡ್ರೆಸ್ಸಿಂಗ್ ರೂಂ ಹೊರಗೆ ಇದ್ದ ಕ್ಯಾಮರಾದಲ್ಲಿ ಘಟನೆ ಕುರಿತ ವಿಡಿಯೋ ತುಣುಕು ದೊರಕಲಿದೆ ಎಂದು ಭಾರತ ತಂಡ ಹೇಳಿದೆ.
ಅಲ್ಲಿ ಕ್ಯಾಮರಾವನ್ನು ಇರಿಸಲಾಗಿತ್ತು. ಆದರೆ, ಘಟನೆ ಸಂದರ್ಭ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ನಾಟಿಂಗ್‌ಹ್ಯಾಮ್‌ಶೈರ್ ವಕ್ತಾರ ತಿಳಿಸಿದ್ದಾರೆ ಎಂದು ಅಂತರ್ಜಾಲ ತಾಣ ತಿಳಿಸಿದೆ. ಘಟನೆ ಕುರಿತ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿರುವುದಾಗಿ ಸಹ ವರದಿಯಾಗಿದೆ.