ಯುಪಿ ಬಿಟ್ಟು ಆಂಧ್ರಕ್ಕೆ ಕೈಫ್
ಕಾನ್ಪುರ: ಈ ಬಾರಿಯ ರಣಜಿ ಋತು ಆರಂಭವಾಗುವ ಮೊದಲು ಆಟಗಾರರು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ವಲಸೆ ಹೋಗುತ್ತಿರುವುದು ಕಂಡುಬರುತ್ತಿದೆ. ಈ ಬಾರಿ ಹಿರಿಯ ಆಟಗಾರ ಮೊಹಮದ್ ಕೈಫ್ ಉತ್ತರ ಪ್ರದೇಶ ತಂಡವನ್ನು ಬಿಟ್ಟು ಆಂಧ್ರಪ್ರದೇಶ ತಂಡವನ್ನು ಮುನ್ನಡೆಸಲಿದ್ದಾರೆ. ಸುದೀರ್ಘ 16 ವರ್ಷಗಳ ಕಾಲ ಉತ್ತರ ಪ್ರದೇಶ ತಂಡದ ಪರ ಆಡಿರುವ ಮೊಹಮದ್ ಕೈಫ್, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9277 ರನ್, 143 ಕ್ಯಾಚ್, 20 ವಿಕೆಟ್ ಕಬಳಿಸಿದ್ದಾರೆ. ಮುಂಬರುವ ಋತುವಿನಲ್ಲಿ ಆಂಧ್ರ ಪ್ರದೇಶವನ್ನು ಪ್ರತಿನಿಧಿಸಲಿದ್ದು, ತಂಡದ ನಾಯಕರಾಗಲಿದ್ದಾರೆ.
ಉತ್ತರ ಪ್ರದೇಶದ ಪರ ನನ್ನ ಪಯಣ ಮುಕ್ತಾಯಗೊಂಡಿದೆ. ಯುವ ಆಟಗಾರರಾದ ಸುರೇಶ್ ರೈನಾ, ಪ್ರವೀಣ್ ಕುಮಾರ್ ಹಾಗೂ ಪಿಯೂಶ್ ಚಾವ್ಲಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಲು ನೆರವಾಗಿದ್ದು, ಈಗ ಬೇರೆ ರಾಜ್ಯದ ಯುವ ಆಟಗಾರರಿಗೆ ನೆರವಾಗಲು ಇಚ್ಛಿಸುತ್ತೇನೆ ಎಂದು ಕೈಫ್ ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಗಂಗ ರಾಜು ಹಾಗೂ ಹಿರಿಯ ಅಧಿಕಾರಿ ಎಸ್ಎಸ್ಕೆ ಪ್ರಸಾದ್ ಸುದೀರ್ಘ ಕಾಲದಿಂದ ನನ್ನೊಂದಿಗೆ ಸಂಪರ್ಕ ಸಾಧಿಸಿದ್ದು, ರಾಜ್ಯದಲ್ಲಿ ಯುವ ಪ್ರತಿಭೆಗಳಿಗೆ ನೆರವು ನೀಡಬೇಕಾಗಿ ಕೋರಿದ್ದಾರೆ. ಹಾಗಾಗಿ ನಾನು ಎರಡು ವರ್ಷಗಳ ಒಪ್ಪಂದಕ್ಕೆ ಮುಂದಾಗಿದ್ದೇನೆ ಎಂದು ಕೈಫ್ ತಿಳಿಸಿದ್ದಾರೆ. ಉತ್ತರ ಪ್ರದೇಶ ನನ್ನ ತವರು. ಅಲಹಬಾದ್ನಲ್ಲಿರುವ ಮನೆಗೆ ತೆರಳುತ್ತಿರುತ್ತೇನೆ. ಆದರೆ ಸದ್ಯಕ್ಕೆ ಆಂಧ್ರ ಪ್ರದೇಶ ಕ್ರಿಕೆಟ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಆ.1ರಿಂದ ನಾನು ಆಂಧ್ರ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ತಿಳಿಸಿದರು.