ಲಾರ್ಡ್ಸ್ನಲ್ಲಿ ಭುವನೇಶ್ವರ ಬೆಸ್ಟ್
ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರಿಗೆ ಸವಾಲಿನ ಗುರಿ ನೀಡಿದೆ.
ಲಂಡನ್: ಆರಂಭಿಕ ಮುರಳಿ ವಿಜಯ್ (98), ಕೆಳ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ (68) ಹಾಗೂ ಭುವನೇಶ್ವರ್ ಕುಮಾರ್ (52) ಅವರ ಚುರುಕಿನ ಜತೆಯಾಟದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರಿಗೆ ಸವಾಲಿನ ಗುರಿ ನೀಡಿದೆ.
ಈ ಮೂಲಕ ಪ್ರವಾಸಿಗರು ಇಂಗ್ಲೆಂಡ್ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ.
ಕ್ರಿಕೆಟ್ನ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ 103.1 ಓವರ್ಗಳಲ್ಲಿ 342ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 319 ರನ್ಗಳ ಗುರಿ ನೀಡಿತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್ ತಂಡ ಚಹಾ ವಿರಾಮದ ವೇಳೆಗೆ 1 ವಿಕೆಟ್ ಕಳೆದುಕೊಂಡು 18 ರನ್ ದಾಖಲಿಸಿತು.
ಮೂರನೇ ದಿನದಾಟದಲ್ಲಿ ಆರಂಭಿಕ ಕುಸಿತ ಕಂಡಿದ್ದ ಭಾರತ, ಮುರಳಿ ವಿಜಯ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಜತೆಯಾಟದಿಂದ ಹೋರಾಟ ನೀಡುವ ಪ್ರಯತ್ನ ನಡೆಸಿತ್ತು. 169ಕ್ಕೆ4ರಿಂದ ದಿನದಾಟ ಆರಂಭಿಸಿದ ಈ ಜೋಡಿ ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾಯಿತು.
ಈ ವೇಳೆ ಧೋನಿ (19) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಟುವರ್ಟ್ ಬಿನ್ನಿ ಶೂನ್ಯ ಸಂಪಾದನೆಗೆ ವಿಕೆಟ್ ಒಪ್ಪಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ 247 ಎಸೆತಗಳನ್ನು ಎದುರಿಸಿ 11 ಬೌಂಡರಿ ನೆರವಿನಿಂದ 95 ರನ್ ದಾಖಲಿಸಿದ್ದ ಮುರಳಿ ವಿಜಯ್, ಚೆಂಡನ್ನು ಕೆಣಕಲು ಮುಂದಾಗಿ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು. ಇದು ಒಂದು ಹಂತದಲ್ಲಿ ಭಾರತದ ಹಿನ್ನಡೆಗೆ ಕಾರಣವಾಗಿತ್ತು.
ಭುವಿ-ಜಡೇಜಾ ಸಾಥ್: ಹೋರಾಟದ ಹಾದಿಯಲ್ಲಿ ಸಾಗುತ್ತಿದ್ದ ಭಾರತ ತಂಡ ಮುಗ್ಗರಿಸುತ್ತಿದ್ದ ವೇಳೆ ಜತೆಯಾದ ರವೀಂದ್ರ ಜಡೇಜಾ ಹಾಗೂ ಭುವನೇಶ್ವರ್ ಕುಮಾರ್ ಚುರುಕಿನ ಆಟ ಪ್ರದರ್ಶಿಸಿದರು.
ಈ ಜೋಡಿ 8ನೇ ವಿಕೆಟ್ಗೆ 99 ರನ್ಗಳ ಅತ್ಯಮೂಲ್ಯ ಜತೆಯಾಟ ನೀಡುವ ಮೂಲಕ, ಭಾರತ ತಂಡದ ಮುನ್ನಡೆಯನ್ನು 300ರ ಗಡಿ ದಾಟುವಂತೆ ನೋಡಿಕೊಂಡಿತು.
ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್ಗೆ ಮುಂದಾಗಿದ್ದು, 57 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನೊಂದಿಗೆ 68 ರನ್ ಗಳಿಸಿದರು.
ಇನ್ನು ಪ್ರಸಕ್ತ ಸರಣಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡುತ್ತಿರುವ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಅರ್ಧಶತಕ ದಾಖಲಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ನಲ್ಲೂ ಅರ್ಧಶತಕ ದಾಖಲಿಸಿದ್ದ ಭುವನೇಶ್ವರ್, ಈ ಇನಿಂಗ್ಸ್ನಲ್ಲೂ 71 ಎಸೆತಗಳನ್ನು ಎದುರಿಸಿ 8 ಬೌಂಡರಿಗಳ ನೆರವಿನೊಂದಿಗೆ 52 ರನ್ ದಾಖಲಿಸಿದರು.
ಈ ಇಬ್ಬರ ಜೋಡಿ ಆಂಗ್ಲರ ವೇಗದ ದಾಳಿಯನ್ನು ಮೆಟ್ಟಿನಿಂತು. ಎದುರಾಳಿ ವಶದಲ್ಲಿದ್ದ ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡರು.
ಆರಂಭಿಕ ಆಘಾತ: ಸವಾಲಿನ ಗುರಿಯನ್ನು ಬೆನ್ನತ್ತಿರುವ ಆಂಗ್ಲರ ಪಡೆ ಆರಂಭದಲ್ಲಿ ಹಿನ್ನಡೆ ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಸ್ಯಾಮ್ ರಾಬ್ಸನ್ ಕೇವಲ 7 ರನ್ ಗಳಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದು, ತಂಡಕ್ಕೆ ಆರಂಭದಲ್ಲೇ ಪೆಟ್ಟು ಬಿದ್ದಿದೆ.
ಇನ್ನು ಅಲಸ್ಟೇರ್ ಕುಕ್ (5) ಹಾಗೂ ಗ್ಯಾರಿ ಬ್ಯಾಲೆನ್ಸ್ (1) ಕ್ರೀಸ್ನಲ್ಲಿದ್ದಾರೆ. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಜಡೇಜಾ, ರಾಬ್ಸನ್ಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಮತ್ತೊಮ್ಮೆ ತಂಡಕ್ಕೆ ನೆರವಾದರು.
ಪಂದ್ಯದಲ್ಲಿ ಇನ್ನು ನಾಲ್ಕು ಅವಧಿಯ ಆಟ ಬಾಕಿ ಇದ್ದು, ಯಾವ ತಂಡ ಹೆಚ್ಚು ನಿಯಂತ್ರಣ ಸಾಧಿಸುತ್ತದೊ ಅವರಿಗೆ ಜಯದ ಹಾರ ಖಚಿತ.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 295,
ಇಂಗ್ಲೆಂಡ್ ಮೊದಲ ಇನಿಂಗ್ಸ್ 319
ಭಾರತ ಎರಡನೇ ಇನಿಂಗ್ಸ್ 342
ಮುರಳಿ ವಿಜಯ್ ಸಿ ಪ್ರಯರ್ ಬಿ ಆ್ಯಂಡರ್ಸನ್ 95, ಧೋನಿ ಸಿ ಬೆಲ್ ಬಿ ಪ್ಲಂಕೆಟ್ 19, ಬಿನ್ನಿ ಸಿ ಕುಕ್ ಬಿ ಅಲಿ 0, ಜಡೇಜಾ ಸಿ ಕುಕ್ ಬಿ ಸ್ಟೋಕ್ಸ್ 68, ಭುವನೇಶ್ವರ್ ಸಿ ಬೆಲ್ ಬಿ ಸ್ಟೋಕ್ಸ್ 52, ಶಮಿ ಸಿ ಪ್ರಯರ್ ಬಿ ಅಲಿ 0, ಇಶಾಂತ್ ಅಜೇಯ 0, ಇತರೆ: (ಬೈ 19, ಎಲ್ಬಿ 9, ವೈಡ್ 1) 29
ವಿಕೆಟ್ ಪತನ: 1-40, 2-118, 3-118, 4-123, 5-202, 6-203, 7-235, 8-334, 9-338, 10-342
ಬೌಲಿಂಗ್ ವಿವರ: ಆ್ಯಂಡರ್ಸನ್ 29-11-77-1, ಬ್ರಾಡ್ 23-6-93-1, ಸ್ಟೋಕ್ಸ್ 18.1-2-51-3, ಪ್ಲಂಕೆಟ್ 22-6-65-3, ಅಲಿ 11-3-28-2
ಇಂಗ್ಲೆಂಡ್ ಎರಡನೇ ಇನಿಂಗ್ಸ್ 1 ವಿಕೆಟ್ಗೆ 18 (ಚಹಾ ವಿರಾಮಕ್ಕೆ)ಢಿ
ರಾಬ್ಸನ್ ಎಲ್ಬಿ ಬಿ ಜಡೇಜಾ 7, ಕುಕ್ ಬ್ಯಾಟಿಂಗ್ 5, ಬ್ಯಾಲೆನ್ಸ್ ಬ್ಯಾಟಿಂಗ್ 1, ಇತರೆ: (ಲೆಗ್ ಬೈ 5) ಒಟ್ಟು 5
ವಿಕೆಟ್ ಪತನ: 1-12
ಬೌಲಿಂಗ್ ವಿವರ: ಭುವನೇಶ್ವರ್ 3-1-2-0, ಶಮಿ 2-0-9-0, ಇಶಾಂತ್ 2-2-0-0, ಜಡೇಜಾ 1-0-2-1