ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಟೇಯ್ನ್ ಶ್ರೇಷ್ಠ ದಾಳಿಗೆ ಲಂಕಾ ಹರಣ

Vishwanath S
Updated On : 21 Jul 2014, 12:26 pm

ಗಾಲೆ: ಮಂದಗತಿಯ ಪಿಚ್‌ನಲ್ಲೂ ತಮ್ಮ ವೇಗದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿದ ದಕ್ಷಿಣ ಆಫ್ರಿಕಾ ಬೌಲರ್‌ಗಳಾದ ಡೇಲ್ ಸ್ಟೇಯ್ನ್ (4) ಹಾಗೂ ಮಾರ್ನ್ ಮಾರ್ಕೆಲ್ (4), ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ 153 ರನ್‌ಗಳ ಅರ್ಹ ಗೆಲವು ತಂದುಕೊಟ್ಟಿದ್ದಾರೆ.
ಭಾನುವಾರ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 216 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಆಫ್ರಿಕಾ ಬೌಲರ್‌ಗಳು ಯಶಸ್ವಿಯಾದರು. ಈ ಗೆಲವಿನೊಂದಿಗೆ ಪ್ರವಾಸಿ ತಂಡ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ದಕ್ಷಿಣ ಆಫ್ರಿಕಾ ನೀಡಿದ 370 ರನ್‌ಗಳು ಬೃಹತ್ ಗುರಿಯನ್ನು ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ ತಂಡ, ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡು 110 ರನ್ ದಾಖಲಿಸುವ ಮೂಲಕ ಉತ್ತಮ ಆರಂಭವನ್ನೇ ಪಡೆದಿತ್ತು.
ಶ್ರೀಲಂಕಾ ಪರ ಬ್ಯಾಟಿಂಗ್ ಮುಂದುವರಿಸಿದ ಕುಶಾಲ ಸಿಲ್ವಾ ಹಾಗೂ ಕುಮಾರ ಸಂಗಕ್ಕಾರ, ದಿನದಾಟದ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ನಾಲ್ಕನೇ ದಿನದಾಟದಲ್ಲಿ 96 ರನ್‌ಗಳ ಜತೆಯಾಟ ನೀಡಿದ್ದ ಈ ಇಬ್ಬರು ಆಟಗಾರರು, ಶ್ರೀಲಂಕಾದ ಇನಿಂಗ್ಸ್ ಕಟ್ಟುವ ಮಹತ್ತರವಾದ ಜವಾಬ್ದಾರಿ ಹೊತ್ತಿದ್ದರು. ಆದರೆ, ದಿನದಾಟದಲ್ಲಿ ರನ್ ಗಳಿಸಲು ವಿಫಲರಾದ ಸಿಲ್ವಾ, 38 ರನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಸಂಗಕ್ಕಾರ ಸಹ 76 ರನ್ ಗಳಿಸಿ ತಮ್ಮ ಆಟಕ್ಕೆ ತೆರೆ ಎಳೆದುಕೊಂಡರು. ಈ ಮೂಲಕ ಲಂಕಾ ತಂಡದ ಹೋರಾಟಕ್ಕೆ ತೀವ್ರ ಹಿನ್ನಡೆ ಉಂಟಾಯಿತು.
ನಂತರ ಬಂದ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು, ದಕ್ಷಿಣ ಆಫ್ರಿಕಾದ ವೇಗದ ದಾಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗದ ಕಾರಣ ಲಂಕಾ ವಿಕೆಟ್‌ಗಳು ತರಗೆಲೆಗಳಂತೆ ಉದುರಿದವು. ಹಿರಿಯ ಬ್ಯಾಟ್ಸ್‌ಮನ್ ಮಹೆಲಾ ಜಯವರ್ದನೆ 10, ಲಹಿರು ತಿರಿಮಾನೆ 12, ಆ್ಯಂಜಲೊ ಮ್ಯಾಥ್ಯೂಸ್ ಅಜೇಯ 27, ದಿನೇಶ್ ಚಂಡಿಮಲ್ 1, ದಿಲ್ರುವಾನ್ ಪೆರೇರಾ 0, ರಂಗನ ಹೆರಾಥ್ 20, ಸುರಾಂಗ ಲಕ್ಮಲ್ 12, ಶಮಿಂದ ಎರಾಂಗ 0 ಸಂಪಾದನೆಗೆ ವಿಕೆಟ್ ಒಪ್ಪಿಸಿದರು.
ಈ ಮೂಲಕ ದಿನದಾಟದಲ್ಲಿ ಲಂಕಾ ಕೇವಲ 39.3 ಓವರ್‌ಗಳಲ್ಲಿ 106 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಹರಿಣಗಳಿಗೆ ತಲೆಬಾಗಿತು.
ಇನ್ನು ದಕ್ಷಿಣ ಆಫ್ರಿಕಾದ ವೇಗಿಗಳಾದ ಡೇಲ್ ಸ್ಟೇಯ್ನ್ 17 ಓವರ್‌ಗಳಲ್ಲಿ 45 ರನ್ ನೀಡಿ 4 ವಿಕೆಟ್ ಪಡೆದರೆ, ಮಾರ್ನ್ ಮಾರ್ಕೆಲ್ 13.3 ಓವರ್‌ಗಳಲ್ಲಿ 29 ರನ್‌ಗಳಿಗೆ 4 ವಿಕೆಟ್ ಪಡೆದರು. ಉಳಿದಂತೆ ಜೆ.ಪಿ ಡುಮಿನಿ 38 ರನ್‌ಗಳಿಗೆ 2 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲೂ 5 ವಿಕೆಟ್ ಪಡೆದಿದ್ದ ಸ್ಟೇಯ್ನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 455ಕ್ಕೆ9 ಡಿ.
ಶ್ರೀಲಂಕಾ ಮೊದಲ ಇನಿಂಗ್ಸ್ 292
ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ 206ಕ್ಕೆ6 ಡಿ.
ಶ್ರೀಲಂಕಾ ಎರಡನೇ ಇನಿಂಗ್ಸ್ 216
(ಕುಮಾರ ಸಂಗಕ್ಕಾರ 76, ಕುಶಾಲ ಸಿಲ್ವಾ 38, ಆ್ಯಂಜಲೊ ಮ್ಯಾಥ್ಯೂಸ್ ಅಜೇಯ 27, ಹೆರಾತ್ 20, ಮಾರ್ನ್ ಮಾರ್ಕೆಲ್ 29ಕ್ಕೆ4, ಡೇಲ್ ಸ್ಟೇಯ್ನ್ 45ಕ್ಕೆ4, ಜೆ.ಪಿ ಡುಮಿನಿ 38ಕ್ಕೆ2)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement