ಆಸೀಸ್ 'ಎ' ತಂಡದಲ್ಲಿ ಭಾರತೀಯ ಮೂಲದ ಸಂಧು
ಮೆಲ್ಬೊರ್ನ್: ಭಾರತೀಯ ಮೂಲದ ಕ್ರಿಕೆಟರ್ ಗುರಿಂದರ್ ಸಂಧು ಅವರು ಆಸ್ಟ್ರೇಲಿಯಾ 'ಎ' ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗಿ ಜೋಶ್ ಹಾಜ್ಲೆವುಡ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗುರಿಂದರ್ ಸಂಧು ಸ್ಥಾನ ಪಡೆದಿದ್ದಾರೆ. ಭಾನುವಾರ ಆಸ್ಟ್ರೇಲಿಯಾ 'ಎ' ತಂಡ, ಭಾರತ 'ಎ' ತಂಡದ ವಿರುದ್ಧ ಜಯ ಸಾಧಿಸಿದ ಪಂದ್ಯದಲ್ಲಿ ಹಾಜ್ಲೆವುಡ್ ಗಾಯಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಸಹ ಭಾಗವಹಿಸಿರುವ ಚತುಷ್ಕೋನ ಪಂದ್ಯಾವಳಿಯ ಉಳಿದ ಪಂದ್ಯಗಳಿಗೆ ಹಾಜ್ಲೆವುಡ್ ಅಲಭ್ಯರಾಗಿದ್ದಾರೆ. ಸಂಧು ಈಗ ಆಸ್ಟ್ರೇಲಿಯಾ 'ಎ' ತಂಡದ ಭಾಗವಾಗಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಆಸ್ಟ್ರೇಲಿಯಾ 'ಎ' ಫಿಲ್ ಹ್ಯೂಸ್ ಬದಲಾಗಿ ಟಾಮ್ ಕೂಪರ್ ಪಂದ್ಯಕ್ಕೆ ಸೇರಿಕೊಂಡಿದ್ದಾರೆ. ಕುಟುಂಬದ ಸದ್ಯರೊಬ್ಬರು ತೀರಿಕೊಂಡ ಹಿನ್ನೆಲೆಯಲ್ಲಿ ತವರಿಗೆ ತೆರಳಿರುವ ಹ್ಯೂಸ್ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.ಗುರುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ 'ಎ' ತಂಡ ದಕ್ಷಿಣ ಆಫ್ರಿಕಾ 'ಎ' ತಂಡವನ್ನು ಎದುರಿಸಲಿದೆ.