ಕಾರ್ಪೊರೇಟ್ ಟಿಟಿ: ಇಎಂಸಿ ಚಾಂಪಿಯನ್
ಬೆಂಗಳೂರು: 11ನೇ ಆವೃತ್ತಿಯ ಕಾರ್ಪೊರೇಟ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಇಎಂಸಿ ಬಿ ಹಾಗೂ ಥಾಮ್ಸನ್ ರಾಯ್ಟರ್ಸ್ ತಂಡಗಳು ಪ್ರಶಸ್ತಿ ಗೆದ್ದುಕೊಂಡಿವೆ.
ಕಳೆದ ಶನಿವಾರ ಹಾಗೂ ಭಾನುವಾರ ನಡೆದ ಸ್ಪರ್ಧೆಯಲ್ಲಿ ಇಎಂಸಿ ಬಿ ತಂಡ ಚಾಂಪಿಯನ್ಸ್ ಕಪ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರೆ, ಥಾಮ್ಸನ್ ರಾಯ್ಟರ್ಸ್ ತಂಡ ರಾಯಲ್ಸ್ ಕಪ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಇಎಂಸಿ ಬಿ ತಂಡವು ಫೈನಲ್ ಸುತ್ತಿನಲ್ಲಿ ಬಾಷ್ ತಂಡವನ್ನು 3-2 ಅಂತರದಲ್ಲಿ ಮಣಿಸಿದರೆ, ಥಾಮ್ಸನ್ ರಾಯ್ಟರ್ಸ್ ತಂಡ ಟಿಸಿಎಸ್ ವಿರುದ್ಧ 3-1 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿತು.
ಈ ಟೂರ್ನಿಯ ಉಳಿದ ವಿಭಾಗದ ಪಂದ್ಯಗಳು ಜು.26 ಮತ್ತು 27ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 40 ಕಾರ್ಪೊರೇಟ್ ಕಂಪನಿಗಳು ಭಾಗವಹಿಸಿವೆ.
ಜಡೇಜಾ-ಜೇಮ್ಸ್ ವಿಚಾರಣೆ ಆ.1ಕ್ಕೆ
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ ನಡುವಣ ಜಗಳದ ಕುರಿತ ವಿಚಾರಣೆಯನ್ನು ಆಗಸ್ಟ್ 1ರಂದು ನಡೆಸಲು ನಿರ್ಧರಿಸಲಾಗಿದೆ.
ಪ್ರಕರಣದ ತನಿಖೆ ನಡೆಸಲು ಐಸಿಸಿ ನೇಮಿಸಿರುವ ನ್ಯಾಯಾಂಗ ಆಯೋಗವು ಈ ಪ್ರಕರಣದ ತನಿಖೆ ನಡೆಸಲಿದೆ. ಅಲ್ಲದೆ ವಿಚಾರಣೆ ನಡೆಸಿದ 24 ಗಂಟೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ.
ಆಗಸ್ಟ್ 1ರಂದು ವಿಚಾರಣೆಯಲ್ಲಿ ನ್ಯಾಯಾಂಗ ಆಯೋಗವು ಐಸಿಸಿ ನಿಯಮಾವಳಿ 5.2.12 ಪ್ರಕಾರ ಆಟಗಾರರು ಹಾಗೂ ಅವರ ಬೆಂಬಲಿಗರ ವಿಚಾರಣೆ ನಡೆಸಿ, ನಂತರ 48 ಗಂಟೆಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಅಲ್ಲದೆ ಅದಕ್ಕೆ ತಕ್ಕ ಕಾರಣ ನೀಡಲಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕ್ರೀಡಾಪಟುಗಳಿಗೆ ಜಿಂದಾಲ್ ಉತ್ತೇಜನ
ಬೆಂಗಳೂರು: ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಜಿಂದಾಲ್ (ಜೆಎಸ್ಡಬ್ಲ್ಯೂ) ಸ್ಪೊರ್ಟ್ಸ್ ಎಕ್ಸೆಲೆನ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವರ್ಷದ ಆರಂಭದಲ್ಲಿ ಈ ಕಾರ್ಯಕ್ರಮದ ಅಂಗವಾಗಿ ಒಟ್ಟು 28 ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಕಾರ್ಯಕ್ರದಲ್ಲಿ ಈಗಾಗಲೇ ಆಯ್ಕೆಯಾಗಿ ತರಬೇತಿ ಪಡೆದಿರುವ ಕ್ರೀಡಾಪಟುಗಳು ಮುಂಬರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಇವರು ಲಾಸ್ ಏಂಜಲೀಸ್ನಲ್ಲಿರುವ ಒಲಿಂಪಿಕ್ಸ್ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆಸಿದ್ದಾರೆ. ಈಗ ಅಥ್ಲೆಟಿಕ್ಸ್, ಈಜು, ಬಾಕ್ಸಿಂಗ್, ಕುಸ್ತಿ, ಜೂಡೊ ಕ್ರೀಡೆಗಳಲ್ಲಿ ಉತ್ತಮ ಪ್ರತಿಭೆ ಹೊಂದಿರುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಂಡು ಒಲಿಂಪಿಕ್ಸ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.
ಕುಟುಂಬದವರಿಗೆ ಶೂಮಾಕರ್ ಸ್ಪಂದನೆ
ಲಂಡನ್: ಸ್ಕೀಯಿಂಗ್ ವೇಳೆ ತೀವ್ರ ಅಪಾಯಕಾರಿ ಅಪಘಾತಕ್ಕೆ ಒಳಗಾಗಿ ಕೋಮಾ ಸ್ಥಿತಿಯಲ್ಲಿರುವ ಫಾರ್ಮುಲಾ ಒನ್ ದಂತಕತೆ ಮೈಕಲ್ ಶೂಮಾಕರ್, ತಮ್ಮ ಕಣ್ಣು ರೆಪ್ಪೆಗಳನ್ನು ಆಡಿಸುವ ಮೂಲಕ ಕುಟುಂಬದವರಿಗೆ ಸ್ಪಂದಿಸಿದ್ದಾರೆ ಎಂದು ವರದಿಗಳು ಬಂದಿವೆ.
ಈ ಮೂಲಕ ಶೂಮಾಕರ್ ಗುಣಮುಖರಾಗುವ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಇನ್ನು ಪೂರ್ಣ ಪ್ರಮಾಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಶೂಮಾಕರ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಮುಂದಿನ ಕೆಲವು ವಾರಗಳಲ್ಲಿ ಮತ್ತಷ್ಟು ಚೇತರಿಕೆ ಕಾಣುವ ನಿರೀಕ್ಷೆ ಇದ್ದು, ಅವರು ಹೊಸ ತಂತ್ರಜ್ಞಾನದ ಎಲೆಕ್ಟ್ರಾನಿಕ್ ವೀಲ್ಚೇರ್ನಲ್ಲಿ ಕೂರುವ ಭರವಸೆ ಹೊಂದಿದ್ದಾರೆ.
ಜರ್ಮನಿಗರ ವಿಜಯದ ಸಂಭ್ರಮದಲ್ಲಿ ವಿಶ್ವಕಪ್ಗೆ ಹಾನಿ
ಇತ್ತೀಚೆಗಷ್ಟೇ ಬ್ರೆಜಿಲ್ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಜರ್ಮನಿ ತಂಡ, ಸಂಭ್ರಮಾಚರಣೆ ವೇಳೆ ಟ್ರೋಫಿಗೆ ಹಾನಿ ಮಾಡಿರುವುದು ಬೆಳಕಿಗೆ ಬಂದಿದೆ.
ಜರ್ಮನಿ ರಾಷ್ಟ್ರೀಯ ತಂಡದ ಆಟಗಾರರು ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸುವಾಗ ಟ್ರೋಫಿಗೆ ಹಾನಿ ಮಾಡಿದ್ದರಿಂದ ಅದರ ಒಂದು ಭಾಗ ಮುರಿದುಬಿದ್ದಿದೆ ಎನ್ನಲಾಗಿದೆ. ಆದರೆ, ನಂತರ ಜರ್ಮನಿ ತಂಡ ಟ್ರೋಫಿಯ ಮಾದರಿಯನ್ನು ತವರಿಗೆ ತೆಗೆದುಕೊಂಡು ಹೋಗಿದಿಯಂತೆ. ಟ್ರೋಫಿಗೆ ಹಾನಿಯಾಗಿರುವುದನ್ನು ಜರ್ಮನಿ ಸಹ ಒಪ್ಪಿಕೊಂಡಿದೆ.
ಆದರೆ, ಟ್ರೋಫಿ ಮುರಿಯಲು ಯಾವ ಆಟಗಾರ ಕಾರಣ ಎಂಬುದು ಪತ್ತೆಯಾಗಿಲ್ಲ. ಆದರೆ, ಮುರಿದ ಟ್ರೋಫಿಯ ಭಾಗವನ್ನು ತಜ್ಞರು ಜೋಡಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಟ್ರೋಫಿಗೆ ಹಾನಿ ಮಾಡಿರುವುದುಇದೇ ಮೊದಲ ಬಾರಿ ಅಲ್ಲ ಎನ್ನಲಾಗಿದೆ.