ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪದಕಗಳ ಮೂಟೆ ನಿರೀಕ್ಷೆಯಲ್ಲಿ ಭಾರತ

ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಈಗ ಸ್ಕಾಟ್ಲೆಂಡ್ ರಾಜಧಾನಿ...

Vishwanath S
Updated On : 23 Jul 2014, 12:59 pm

ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಈಗ ಸ್ಕಾಟ್ಲೆಂಡ್ ರಾಜಧಾನಿ ಗ್ಲಾಸ್ಗೋದಲ್ಲಿ ಶುರುವಾಗಲಿದೆ. ಬುಧವಾರ ಆರಂಭವಾಗಲಿರುವ 20ನೇ ಆವೃತ್ತಿಯ ಭವ್ಯ ಕ್ರೀಡಾಕೂಟದ ಆತಿಥ್ಯ ವಹಿಸಿರುವ ಗ್ಲಾಸ್ಗೋ ಸರ್ವರೀತಿಯಿಂದಲೂ ಸಜ್ಜುಗೊಂಡಿದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ನಂತರದ ಮೂರನೇ ದೊಡ್ಡ ಕ್ರೀಡಾಕೂಟ ಇದಾಗಿದೆ. ಈ ಬಾರಿಯೂ ಪದಕಗಳನ್ನು ಕೊಳ್ಳೆ ಹೊಡೆಯುವ ಗುರಿಯೊಂದಿಗೆ ಭಾರತದ 215 ಕ್ರೀಡಾಪಟುಗಳ ದಂಡು ಅಲ್ಲಿ ಬೀಡು ಬಿಟ್ಟಿದೆ. ಭಾರತದಿಂದ ಇಷ್ಟೊಂದು ಕ್ರೀಡಾಪಟುಗಳನ್ನು ಕಣಕ್ಕಿಳಿಸಿರುವುದು ಎರಡನೇ ಗರಿಷ್ಠ ಸಂಖ್ಯೆ ಎನಿಸಿದೆ. ಪಥಸಂಚಲನದಲ್ಲಿ ಖ್ಯಾತ ಶೂಟರ್ ವಿಜಯ್ ಕುಮಾರ್ ತ್ರಿವರ್ಣಧ್ವಜ ಹಿಡಿದು ಭಾರತ ತಂಡ ಮುನ್ನಡೆಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ 41 ಸ್ಪರ್ಧಿಗಳು ಪಾಲ್ಗೊಳ್ಳುತ್ತಿರುವುದು ಹೆಚ್ಚಿನ ಸಂಖ್ಯೆಯಾಗಿದೆ. ಒಟ್ಟು 17 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 261 ಪದಕಗಳಿಗಾಗಿ ಕ್ರೀಡಾಪಟುಗಳು ಭೇಟೆ ನಡೆಸಲಿದ್ದಾರೆ. ಭಾರತ 14 ಕ್ರೀಡೆಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ನೆಟ್‌ಬಾಲ್, ರಗ್ಬಿ ಸೆವೆನ್ಸ್, ಮತ್ತು ಟ್ರಯಥ್ಲಾನ್ ಕ್ರೀಡೆಗಳಲ್ಲಿ ಭಾರತದಿಂದ ಯಾರೊಬ್ಬರೂ ಸ್ಪರ್ಧೆಗಿಳಿಯುತ್ತಿಲ್ಲ. ಒಟ್ಟು 71 ರಾಷ್ಟ್ರಗಳ 4,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಜಮೈಕಾದ ಉಸೇನ್ ಬೋಲ್ಟ್ ಕೇಂದ್ರಬಿಂದುವಾಗಿದ್ದಾರೆ. ತವರಿನಲ್ಲಿ ನಡೆದ 2010ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಇತಿಹಾಸವನ್ನೇ ಸೃಷ್ಠಿಸಿತ್ತು. 38 ಚಿನ್ನ, 27 ಬೆಳ್ಳಿ, ಮತ್ತು 36 ಕಂಚು ಸೇರಿದಂತೆ ಒಟ್ಟು 101 ಪದಕ ಸಂಪಾದಿಸಿ ಕ್ರೀಡಾಕೂಟದಲ್ಲಿ ಕಿಚ್ಚು ಹಚ್ಚಿತ್ತು. ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂತರ ಎರಡನೇ ಸ್ಥಾನದ ಗೌರವ ಭಾರತ ಪಡೆದಿತ್ತು. ತವರು ಅಂಗಣ ಸಹಜವಾಗಿಯೇ ಭಾರತಕ್ಕೆ ದೊಡ್ಡ ಲಾಭ ತಂದುಕೊಟ್ಟಿತ್ತು. ಈ ಬಾರಿಯೂ ಅಗ್ರ ಮೂರರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ. ಆದರೆ ಈಗ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟ ನಿಜಕ್ಕೂ ಭಾರತದ ಪಾಲಿಗೆ ಅಗ್ನಿ ಪರೀಕ್ಷೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಒಂದು ಸಮಸ್ಯೆಯಾದರೆ, ಸ್ಪರ್ಧೆಯ ಕಾವು ಹೆಚ್ಚಿರುವುದು ಮತ್ತೊಂದು ಸವಾಲು. ಹಾಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಪದಕಗಳಿಕೆಯಲ್ಲಿ ಶತಕ ಪೂರೈಸುವುದೇ ಎಂಬ ಚಿಂತೆ ಶುರುವಾಗಿದೆ. ಆದರೂ ಅನೇಕ ಭರವಸೆಯ ಪ್ರತಿಭೆಗಳು ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತವರಿನ ತೇರನ್ನು ಸಾಧನೆಯೆಡೆಗೆ ಕೊಂಡೊಯ್ಯುವ ನಿರೀಕ್ಷೆ ಇದೆ.
ಅಥ್ಲೆಟಿಕ್ಸ್: ಕ್ರೀಡಾಕೂಟದಲ್ಲಿ ಭಾರತದಿಂದ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುತ್ತಿರುವುದು ಅಥ್ಲೆಟಿಕ್ಸ್ ವಿಭಾಗದಲ್ಲಿ. 41 ಕ್ರೀಡಾಪಟುಗಳು ತಮ್ಮ ಸಾಮಥ್ಯ ಒರೆಗೆ ಹಚ್ಚಿ ನಿಂತಿದ್ದಾರೆ. ಮಹಿಳೆಯರ 4್ಗ100ಮೀ. ಮತ್ತು 4್ಗ400 ರಿಲೆಯಲ್ಲಿ ಹಾಗೂ ಪುರುಷರ ಡಿಸ್ಕಸ್‌ನಲ್ಲಿ ವಿಕಾಸ್ ಗೌಡರಿಂದ ಪದಕದ ನಿರೀಕ್ಷೆ ಇದೆ. ಅಥ್ಲೆಟಿಕ್ಸ್‌ನಲ್ಲಿ ಈ ಬಾರಿ 3-4 ಪದಕಗಳನ್ನಷ್ಟೇ ನಿರೀಕ್ಷಿಸಬಹುದು. ಕರ್ನಾಟಕದಿಂದ ಎಂ.ಆರ್ ಪೂವಮ್ಮ, ಅಶ್ವಿನಿ ಅಕ್ಕುಂಜೆ, ಸಹನಾ ಕುಮಾರಿ ಮತ್ತು ವಿಕಾಸ್ ಗೌಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಕಳೆದ ದೆಹಲಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ 12 ಪದಕಗಳು ಲಭಿಸಿದ್ದವು. ಇದರಲ್ಲಿ 2 ಚಿನ್ನ, 3 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಸೇರಿವೆ.
 ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಸೈನಾ ಹೊರಗುಳಿಯುತ್ತಿರುವುದು ಭಾರತದ ಪಾಲಿಗೆ ಚಿನ್ನದ ಪದಕ ಗೆದ್ದುಕೊಳ್ಳುವಂತ ಅವಕಾಶವೊಂದು ಕೈಜಾರಿಹೋದಂತಾಗಿದೆ. ಆದರೆ ತಂಡದ ನೇತೃತ್ವ ವಹಿಸಿರುವ ಪಿ.ವಿ ಸಿಂಧು ಹಾಗೂ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರಿಂದ ಪದಕದ ಆಸೆ ಇದೆ. ಕಶ್ಯಪ್ ತುಳಸಿ, ಶ್ರೀಕಾಂತ್, ಗುರುಸಾಯಿದತ್, ಅಕ್ಷಯ್ ಪ್ರಣಬ್ ಪೈಕಿ ಯಾರಾದರು ಪದಕ ಗೆದ್ದರೆ ಉತ್ತಮ ಸಾಧನೆಯಾಗಲಿದೆ. 2010ರ ಕೂಟದಲ್ಲಿ ಈ ವಿಭಾಗದಲ್ಲಿ ಭಾರತ 2 ಚಿನ್ನ, 1 ಬೆಳ್ಳಿ, 1 ಕಂಚು ಸೇರಿದಂತೆ 4 ಪದಕ ಜಯಿಸಿತ್ತು.
ಬಾಕ್ಸಿಂಗ್: ಈ ಸ್ಪರ್ಧೆಯಲ್ಲಿ 8 ಮಂದಿ ಪುರುಷರು ಮತ್ತು 3 ಮಹಿಳೆಯರು ಪದಕದ ಆಸೆ ಹೊತ್ತು ರಿಂಗ್‌ನಲ್ಲಿ ನಿಂತಿದ್ದಾರೆ. ದೇವೇಂದ್ರ ಸಿಂಗ್, ಶಿವಥಾಪ, ಮನೋಜ್ ಕುಮಾರ್, ಮಂದೀಪ್ ಜಂಗ್ರಾ, ವಿಜೇಂದರ್ ಸಿಂಗ್, ಸುಮಿತ್ ಸಂಗ್ವಾನ್, ದಿನೇಶ್ ಕುಮಾರ್ ಮತ್ತು ಪ್ರವಿಣ್ ಮೋರೆ ಪದಕದ ಗುರಿ ಇಟ್ಟುಕೊಂಡಿದ್ದಾರೆ. ಮಹಿಳೆಯರಲ್ಲಿ, ಪಿಂಕಿ ಜಂಗ್ರಾ, ಸರಿತಾ ದೇವಿ, ಪೂಜಾ ರಾಣಿ, ಕನಿಷ್ಠ ಪದಕದ ನಿರೀಕ್ಷೆಯಲ್ಲಿದ್ದಾರೆ. ಮುಖ್ಯವಾಗಿ ವಿಜೇಂದರ್ ಸಿಂಗ್ ತವರಿಗೆ ಪದಕ ಗೆದ್ದುಕೊಡುವ ಆಶಾಭಾವನೆಯಾಗಿದ್ದಾರೆ. ದೆಹಲಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಇಲ್ಲಿ 3 ಚಿನ್ನ, 4 ಕಂಚು ಸೇರಿ 7 ಪದಕಗಳು ದಕ್ಕಿದ್ದವು.
ಸೈಕ್ಲಿಂಗ್: ಈ ವಿಭಾಗದಲ್ಲಿ ಭಾರತದ ಪಾಲಿಗೆ ಪದಕಗಳು ಮಾರುದ್ದವೇ ದೂರ ಎಂಬಂತ್ತಿದೆ. ಪುರುಷರ ವಿಭಾಗದಿಂದ ಅಲನ್ ಬೇಬಿ, ಅಮೃತ್ ಸಿಂಗ್, ಅಮರ್‌ಜಿತ್ ನಾಗಿ, ಸುರೇಶ್ ಬಿಷ್ನೋಯಿ, ಮಂಜಿತ್ ಸಿಂಗ್, ಸೋಂಬಿರ್, ಅಮಿತ್ ಕುಮಾರ್, ಶ್ರೀಧರ್ ಸವಣುರ್, ಅವರವಿಂದ್ ಪವಾರ್ ಸ್ಪರ್ಧಿಸಿದ್ದಾರೆ. ಮಹಿಳೆಯರಲ್ಲಿ ದೇಬೊರಾ, ಮಹಿತಾ ಮೊಹನ್, ಕೆಜಿಯಾ ವರ್ಗಿಸ್, ಸುಮಿತಾ ಯಂಗ್ಲೆನ್ ಮಹಿಳೆಯರ ಸವಾಲು ಮುನ್ನಡೆಸಲಿದ್ದಾರೆ. ಸೈಕ್ಲಿಂಗ್‌ನಲ್ಲಿ ತೀವ್ರ ಪೈಪೋಟಿ ಎದುರಾಗುವುದರಿಂದ ಭಾರತೀಯರು ಅಂತಿಮ ಸುತ್ತಿಗೂ ಅರ್ಹತೆ ಪಡೆದುಕೊಳ್ಳುವುದು ಕಷ್ಟ ಎನಿಸಿದೆ. ಕಳೆದ ದೆಹಲಿ ಗೇಮ್ಸ್‌ನಲ್ಲಿ ತವರಿನ ಸ್ಪರ್ಧಿಗಳು ಬರಿಗೈಯಲ್ಲಿ ಮರಳಿದ್ದರು.
 ಕುಸ್ತಿ: ಈ ಬಾರಿಯೂ ಭಾರತ ಕುಸ್ತಿ ಸ್ಪರ್ಧೆಯಲ್ಲಿ ಹೆಚ್ಚಿನ ಪದಕಗಳ ಮೇಲೆ ಕಣ್ಣಿಟ್ಟಿದೆ. ದೆಹಲಿ ಕೂಟದಲ್ಲಿ ಭಾರತ 10 ಚಿನ್ನ, 5 ಬೆಳ್ಳಿ, 4 ಕಂಚು ಒಳಗೊಂಡಂತೆ 19 ಪದಕ ಗೆದ್ದಿಕೊಂಡಿತ್ತು. ಶೂಟಿಂಗ್ ನಂತರ ಕುಸ್ತಿಯಲ್ಲಿ ಹೆಚ್ಚು ಪದಕಗಳು ಲಭಿಸಿದ್ದವು. ಈಗ ಆ ಸಾಧನೆಯನ್ನು ಮತ್ತಷ್ಟು ಉತ್ತಮಪಡಿಸುವ ಲೆಕ್ಕಾಚಾರದಲ್ಲಿ ಕುಸ್ತಿಪಟುಗಳಿದ್ದಾರೆ. ಸುಶೀಲ್ ಕುಮಾರ್ ಇಲ್ಲಿ ಕೇಂದ್ರ ಬಿಂದು ಉಳಿದಂತೆ ಯೋಗೇಶ್ವರ್ ದತ್, ಭಜರಂಗ್, ಬಬಿತಾ ಕುಮಾರಿ ಮತ್ತು ಲಲಿತಾ  ಪದಕದ ಆಸೆ ಚಿಗುರಿಸಿದ್ದಾರೆ.
ವೇಟ್‌ಲಿಫ್ಟಿಂಗ್: ಈ ಸ್ಪರ್ಧೆಯಲ್ಲಿ 8 ಮಂದಿ ಪುರುಷರು ಸೇರಿದಂತೆ ಒಟ್ಟು 15 ಲಿಫ್ಟರ್‌ಗಳು ಪದಕದ ಭಾರ ಹೊರುವ ವಿಶ್ವಾಸದಲ್ಲಿದ್ದಾರೆ. ಕೆ.ರವಿ ಕುಮಾರ್ ರಾಷ್ಟ್ರಧ್ವಜದೊಂದಿಗೆ ತಂಡ ಮುನ್ನಡೆಸಲಿದ್ದಾರೆ. ಸಂಜೀತಾ ಚಾನು ಮಹಿಳೆಯರ ವಿಭಾಗದ ಭರವಸೆಯ ಲಿಫ್ಟರ್ ಆಗಿದ್ದಾರೆ. ಇತ್ತೀಚಿನ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಭಾರತದಲ್ಲಿ ಲಿಫ್ಟಿಂಗ್‌ಗೆ ಕಳಂಕ ತಂದಿದೆ. ಇದರಿಂದ ಮುಕ್ತವಾಗಲು ಲಿಫ್ಟರ್‌ಗಳು ಗ್ಲಾಸ್ಗೋದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಸುಖೇನ್ ಡೇ, ರುಸ್ತಮ್ ಸಾರಂಗ್, ಮೀರಾಬಾಯಿ ಚಾನು, ಮಿನಾ ಕುಮಾರಿ, ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. 2010ರ ಗೇಮ್ಸ್‌ನಲ್ಲಿ ಭಾರತದ ಲಿಫ್ಟರ್‌ಗಳು ತಲಾ 2 ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಒಟ್ಟು 8 ಪದಕ ಗೆದ್ದು ಗಮನ ಸೆಳೆದಿದ್ದರು.
ಹಾಕಿ: ಸರ್ದಾರ್ ಸಿಂಗ್ ನಾಯಕತ್ವದಲ್ಲಿ ಅಖಾಡಕ್ಕೆ ಧುಮುಕಿರುವ ಹಾಕಿ ಪಡೆಗೆ ಅಗ್ನಿ ಪರೀಕ್ಷೆ ಕಾದಿದೆ. ಎ ಗುಂಪಿನಲ್ಲಿರುವ ಭಾರತದ ಜತೆ ಪ್ರಬಲ ಆಸ್ಟ್ರೇಲಿಯಾ ತಂಡವಿದೆ. ಉಳಿದಂತೆ ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೇಲ್ಸ್ ತಂಡಗಳು ಉತ್ತಮ ತಯಾರಿಯೊಂದಿಗೆ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ. ಆದರೆ ಭಾರತ ತನಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವಷ್ಟು ಸಮರ್ಥವಾಗಿದ್ದು, ಪದಕದ ಭೇಟೆಯಾಡುವ ವಿಶ್ವಾಸತುಂಬಿದೆ. ವಿದೇಶಿ ಕೋಚ್ ಟೆರ್ರಿ ವಾಲ್ಷ್ ಉತ್ತಮ ರೀತಿಯಲ್ಲಿ ತಂಡವನ್ನು ಹಣಿಯಾಗಿಸಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಾದ ವಿ.ಆರ್ ರಘುನಾಥ್, ಎಸ್.ವಿ ಸುನಿಲ್, ನಿಖಿನ್ ತಿಮ್ಮಯ್ಯ ಪ್ರಮುಖರಾಗಿದ್ದಾರೆ. ಉಪನಾಯಕ, ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್‌ರನ್ನು ತಂಡ ಹೆಚ್ಚಾಗಿ ನಂಬಿಕೊಂಡಿದೆ. ದೆಹಲಿ ಗೇಮ್ಸ್‌ನಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿತ್ತು. ಮಹಿಳೆಯರ ವಿಭಾಗದಲ್ಲಿ ರೀತು ರಾಣಿ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಪಡೆ ಇದ್ದರೂ ಪದಕದ ಖಚಿತತೆ ಇಲ್ಲ.
ಶೂಟಿಂಗ್: ಭಾರತ ಈ ಬಾರಿ ಕೂಡ ಶೂಟಿಂಗ್‌ನಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಿದೆ. ಒಟ್ಟು 33 ಗುರಿಕಾರರು ಸ್ಪರ್ಧೆಯಲ್ಲಿದ್ದಾರೆ. ಕಳೆದ ಬಾರಿ ದೆಹಲಿ ಕೂಟದಲ್ಲಿ ತವರಿಗೆ ಶೂಟಿಂಗ್‌ನಲ್ಲೇ (ಒಟ್ಟು 30) ಹೆಚ್ಚಜು ಪದಕಗಳು ದೊರೆತಿದ್ದವು. ಇದರಲ್ಲಿ 14 ಚಿನ್ನ, 11 ಬೆಳ್ಳಿ ಮತ್ತು 5 ಕಂಚು ಸೇರಿವೆ. ಭಾರತದ ಪಾಲಿಗೆ ಅತಿ ಹೆಚ್ಚು ಪದಕ ಗಳಿಸಿಕೊಡುವ ಭರವಸೆ ಇರುವ ಶೂಟಿಂಗ್‌ನಲ್ಲಿ ಈ ಬಾರಿ ಉತ್ತಮ ಪ್ರದರ್ಶನ ಹೊರಹೊಮ್ಮುವ ಅಂದಾಜಿದೆ. ಅಭಿನವ್ ಬಿಂದ್ರಾ, ಗಗನ್ ನಾರಂಗ್, ವಿಜಯ್ ಕುಮಾರ್, ಮಾನವ್‌ಜಿತ್ ಸಿಂಗ್ ಸಂಧು, ಹೀನಾ ಸಿಧು ಪದಕ ಭೇಟೆಯಲ್ಲಿ ಮುಂಚುಣಿಗರೆನಿಸಿದ್ದಾರೆ.
ಟೇಬಲ್ ಟೆನಿಸ್: ಟೇಬಲ್ ಟೆನಿಸ್‌ನಲ್ಲಿ ಈ ಬಾರಿಯೂ ಪದಕದ ಆಸೆ ಗರಿಗೆದರಿದೆ. ಶರತ್ ಕಮಲ್, ಸೌಮ್ಯಜಿತ್ ಘೋಶ್ ಹಾಗೂ ಮಹಿಳೆಯರಲ್ಲಿ ಅಂಕಿತಾ ದಾಸ್, ಪೌಲಮಿ ಘಾಟಕ್ ಮತ್ತು ಶಾಮಿನಿ ಕುಮಾರ್‌ಸನ್ ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ದೆಹಲಿ ಕೂಟದಲ್ಲಿ ಭಾರತದ ಟಿಟಿಪಟುಗಳು ತಲಾ ಒಂದು ಚಿನ್ನ ಮತ್ತು ಬೆಳ್ಳಿ ಒಳಗೊಂಡಂತೆ ಒಟ್ಟು 5 ಪದಕ ಸಂಪಾದಿಸಿದ್ದರು.
ಈಜು: ಈಜಿನಲ್ಲಿ ಪದಕ ನಿರೀಕ್ಷೆ ವಿರಳ. ಸಾಜನ್ ಪ್ರಕಾಶ್ ಮತ್ತು ಸಂದೀಪ್ ಸೆಜ್ವಾಲ್ ಉತ್ತಮ ಪ್ರದರ್ಶನ ನೀಡಬಲ್ಲವರಾಗಿದ್ದರೂ ಈಜು ಕೊಳದಲ್ಲಿ ತೀವ್ರ ಪೈಪೋಟಿ ಇರುವ ಕಾರಣ ಪದಕ ಸಮೀಪವು ಬರುವುದು ಕಷ್ಟ ಎನಿಸಿದೆ. ಡೈವಿಂಗ್‌ನಲ್ಲಿ ಕೆ.ರಮಾನಂದ್ ಮತ್ತು ಸಿದ್ಧಾರ್ಥ್ ಪರದೇಶಿ ಭಾಗವಹಿಸುತ್ತಿರುವುದೇ ಹೆಮ್ಮೆ. 2010ರ ದೆಹಲಿ ಕಾಮನ್‌ವೆಲ್ತ್ ಗೆಮ್ಸ್‌ನಲ್ಲಿ ಪ್ರಶಾಂತ್ ಕರ್ಮಾಕರ್ ಪುರುಷರ 50ಮೀ. ಫ್ರೀಸ್ಟೈಲ್ ಪ್ಯಾರಾಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದೇ ಉತ್ತಮ ಸಾಧನೆಯಾಗಿತ್ತು.
ಲಾನ್ ಬೌಲಿಂಗ್: ಈ ಸ್ಪರ್ಧೆ ಭಾರತದಲ್ಲಿ ಹೆಚ್ಚು ಜನಪ್ರಿವಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಹಲವಾರು ಪ್ರತಿಭೆಗಳನ್ನು ಕಾಣಬಹುದು. ಗ್ಲಾಸ್ಗೋ ಕ್ರೀಡಾಕೂಟದಲ್ಲಿ ತಲಾ ಐವರು ಪುರುಷರು ಹಾಗೂ ಮಹಿಳೆಯರು ಸ್ಪರ್ಧೆಗೆ ನಿಂತಿದ್ದಾರೆ. ಈ ಪೈಕಿ ದಿನೇಶ್ ಕುಮಾರ್, ಕಮಲ್ ಶರ್ಮಾ, ಚಂದನ್ ಸಿಂಗ್ ಹಾಗೂ ಪಿಂಕಿ ಪದಕದ ಭರವಸೆ ಮೂಡಿಸಿದ್ದಾರೆ. ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತವರಿಗೆ ಯಾವುದೇ ಪದಕ ಲಭಿಸಿರಲಿಲ್ಲ.
ಜೂಡೊ: ಈ ವಿಭಾಗದಲ್ಲಿ ಪುರುಷರ ಪಡೆಯಿಂದ 7 ಹಾಗೂ ಮಹಿಳೆಯರ ತಂಡದ 7 ಕ್ರೀಡಾಪಟುಗಳು ಪದಕ ಗೆದ್ದು ಬರುವ ವಿಶ್ವಾಸದೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ. ಅವತಾರ್ ಸಿಂಗ್, ಗರಿಮಾ ಚೌಧರಿ, ಶಿವಾನಿ ಮತ್ತು ರಾಜ್‌ವಿಂದರ್ ಕೌರ್ ಅವರು ಪದಕದ ಆಕಾಂಕ್ಷಿಯಾಗಿದ್ದಾರೆ.
ಸ್ಕ್ವಾಷ್: ಸ್ಕ್ವಾಷ್‌ನಲ್ಲೂ ಭಾರತೀಯರಿಗೆ ಕಠಿಣ ಸವಾಲು ಎದುರಾಗಲಿದೆ. ಪುರುಷರ- ಮಹಿಳೆಯರ ಸಿಂಗಲ್ಸ್, ಡಬಲ್ಸ್, ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಾಕಷ್ಟು ಅನುಭವಿಗಳಾದ ಸೌರವ್ ಘೋಶಾಲ್, ದೀಪಿಕಾ ಪಳ್ಳಿಕಲ್ ಮತ್ತು ಜೋಷ್ನಾ ಚಿನ್ನಪ್ಪ ಅವರಿಂದ ಪದಕ ನಿರೀಕ್ಷಿಸಲಾಗಿದೆ. ಕಳೆದ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಜಿಮ್ನಾಸ್ಟಿಕ್ಸ್: ಈ ಸ್ಪರ್ಧೆಯಲ್ಲಿ ಮತ್ತೊಮ್ಮೆ ಆಶಿಶ್ ಕುಮಾರ್‌ರಿಂದ ಪದಕ ನಿರೀಕ್ಷಿಸಲಾಗಿದೆ. ದೆಹಲಿ ಕ್ರೀಡಾಕೂಟದಲ್ಲಿ ಭಾರತಕ್ಕೆ ದಕ್ಕಿದ್ದ ಎರಡೂ ಪದಕಗಳನ್ನು (ಬೆಳ್ಳಿ ಮತ್ತು ಕಂಚು) ಆಶಿಶ್ ಗೆದ್ದುಕೊಟ್ಟಿದ್ದರು. ಇನ್ನುಳಿದಂತೆ ರಾಕೇಶ್ ಪಾತ್ರ, ಮಹಿಳೆಯರಲ್ಲಿ ದೀಪಾ ಕರ್ಮಾಕರ್, ಪ್ರಣತಿ ದಾಸ್, ಪ್ರಣತಿ ನಾಯಕ್, ಅರುಣಾ ರೆಡ್ಡಿ, ರುಚಾ ದಿವೇಕರ್, ಸಾಮರ್ಥ್ಯ ಪ್ರದರ್ಶಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಜಿಮ್ನಾಸ್ಟಿಕ್ಸ್‌ನಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸುವುದು ಕಷ್ಟವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement