ಸವಾಲಿಗೆ ನಾವ್ ರೆಡಿ...
ಗ್ಲಾಸ್ಗೋ: ಪ್ರಸಕ್ತ ಕಾಮನ್ನೆಲ್ತ್ ಕ್ರೀಡಾಕೂಟದಲ್ಲಿ ಪೊಡಿಯಂ ಸ್ಥಾನ ಪಡೆಯಲೇಬೇಕೆಂದು ಪಣತೊಟ್ಟಿರುವ ಭಾರತ ವನಿತೆಯರ ಹಾಕಿ ತಂಡ, ಕೆನಡಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲವು ಸಾಧಿಸಿ ಶುಭಾರಂಭ ಮಾಡಲು ಸಜ್ಜಾಗಿದೆ.
ಗುರುವಾರ ನಡೆಯಲಿರುವ ಎ ಗುಂಪಿನ ಮೊದಲ ಪಂದ್ಯದಲ್ಲಿ 13ನೇ ರ್ಯಾಂಕಿಂಗ್ನ ಭಾರತ ತಂಡ 22ನೇ ರ್ಯಾಂಕಿಂಗ್ನ ಕೆನಡಾ ಸವಾಲನ್ನು ಎದುರಿಸಲಿದ್ದು, ಉತ್ತಮ ಆರಂಭ ಪಡೆಯುವ ಮೂಲಕ ಗೆಲವಿನ ಹಾದಿಯಲ್ಲಿ ಸಾಗಲು ಸಿದ್ಧತೆ ನಡೆಸಿದೆ. ನಂತರ ಭಾರತ ತಂಡ ನ್ಯೂಜಿಲೆಂಡ್, ಟ್ರಿನಿಡಾಡ್ ಅಂಡ್ ಟೊಬಾಗೊ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ. ಭಾರತ ತಂಡ ಆರಂಭಿಕ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿದೆ. ಭಾರತ ವನಿತೆಯರು ಕೆನಡಾ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದು, 2012ರಲ್ಲಿ ಕೆನಡಾ ತಂಡವನ್ನು 4-0 ಅಂತರದಿಂದ ಮಣಿಸಿತ್ತು. ಇನ್ನು 2002ರಲ್ಲಿ ಹಾಗೂ 2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡ ಕೆನಡಾವನ್ನು ಎದುರಿಸಿದ್ದು, ಎರಡೂ ಬಾರಿಯೂ ಗೆಲವು ದಾಖಲಿಸಿದೆ.
ಇನ್ನು ಇತ್ತೀಚೆಗೆ ಮಲೇಷ್ಯಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ವನಿತೆಯರು 6-0 ಅಂತರದ ಗೆಲವುದಾಖಲಿಸಿರುವುದು, ತಂಡ ಆತ್ಮ ವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಒಟ್ಟಿನಲ್ಲಿ ಯುವ ಹಾಗೂ ಅನುಭವಿ ಆಟಗಾರ್ತಿಯರ ಸಮತೋಲಿತ ತಂಡವಾಗಿರುವ ಭಾರತ ವನಿತೆಯರು ಕ್ರೀಡಾಕೂಟದಲ್ಲಿ ಮಿಂಚು ಹರಿಸಲು ಎದುರುನೋಡುತ್ತಿದ್ದಾರೆ.