ಉತ್ತಪ್ಪ ಪಡೆಗೆ ಸುಲಭ ಜಯ
ಡಾರ್ವಿನ್: ಮಧ್ಯಮ ವೇಗಿ ಮೋಹಿತ್ ಶರ್ಮಾ ಮಾರಕ ದಾಳಿ ಹಾಗೂ ಮನನ್ ವೊಹ್ರಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡವು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಚತುಷ್ಕೋನ ಏಕದಿನ ಸರಣಿಯಲ್ಲಿ ನ್ಯಾಷನಲ್ ಪರ್ಫಾಮೆನ್ಸ್ ಸ್ಕ್ವಾಡ್ (ಎನ್ಪಿಎಸ್) ವಿರುದ್ಧ ಸುಲಭ ಗೆಲವು ದಾಖಲಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಭಾರತ ಎ ತಂಡವು ಎನ್ಪಿಎಸ್ ವಿರುದ್ಧ 6 ವಿಕೆಟ್ಗಳ ಅರ್ಹ ಗೆಲವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಎನ್ಪಿಎಸ್ 50 ಓವರುಗಳಲ್ಲಿ 9 ವಿಕೆಟ್ಗೆ 217 ರನ್ ದಾಖಲಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 38 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 218 ರನ್ ದಾಖಲಿಸಿತು.
ಮೋಹಿತ್ ಮಾರಕ: ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂ ಶಾರ್ಟ್ (24) ಹಾಗೂ ಕೆಮರೂನ್ ಬ್ಯಾನ್ಕ್ರಾಫ್ಟ್ (37) ಹಾಗೂ ಅಲೆಕ್ಸ್ ಖೇತ್ (17) ಉತ್ತಮ ಆರಂಭ ಪಡೆದರೂ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ನಂತರ ಬಂದ ಟ್ರಾವಿಸ್ ಹೆಡ್, ತಂಡದ ಇನಿಂಗ್ಸ್ ಕಟ್ಟುವತ್ತ ಗಮನ ಹರಿಸಿದರು.
ತಾಳ್ಮೆಯ ಬ್ಯಾಟಿಂಗ್ ನಡೆಸಿದ ಹೆಡ್ 69 ಎಸೆತಗಳನ್ನು ಎದುರಿಸಿ 3 ಬೌಂಡರಿಗಳ ನೆರವಿನಿಂದ 56 ರನ್ ದಾಖಲಿಸಿದರು. ನಂತರ ಯಾವುದೇ ಬ್ಯಾಟ್ಸ್ಮನ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಎನ್ಪಿಎಸ್ ಸಾಧಾರಣ ಮೊತ್ತಕ್ಕೆ ಇನಿಂಗ್ಸ್ ತೆರೆ ಎಳೆದುಕೊಂಡಿತು. ಭಾರತದ ಮೋಹಿತ್ ಶರ್ಮಾ 4 ವಿಕೆಟ್ ಕಬಳಿಸಿದರು.
ಮಿಂಚಿದ ಮನನ್: ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಯಾದ ಮನನ್ ವೊಹ್ರಾ ಹಾಗೂ ಅಂಬಟಿ ರಾಯುಡು ಜವಾಬ್ದಾರಿಯುತ ಬ್ಯಾಟಿಂಗ್ನಿಂದ ತಂಡವನ್ನು ಮುನ್ನಡೆಸಿದರು.
ವೊಹ್ರಾ 95 ಎಸೆತಗಳನ್ನು ಎದುರಿಸಿ 12 ಬೌಂಡರಿ ನೆರವಿನೊಂದಿಗೆ 88 ರನ್ ದಾಖಲಿಸಿದರೆ, ಅಂಬಟಿ ರಾಯುಡು 80 ಎಸೆತಗಳಲ್ಲಿ 11 ಬೌಂಡರಿ ನೆರವಿನೊಂದಿಗೆ ಅಜೇಯ 70 ರನ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯಾಷನಲ್ ಪರ್ಫಾಮೆನ್ಸ್ ಸ್ಕ್ವಾಡ್ 50 ಓವರುಗಳಲ್ಲಿ 9 ವಿಕೆಟ್ಗೆ 217 (ಹೆಡ್ 56, ಬ್ಯಾನ್ಕ್ರಾಫ್ಟ್ 37, ಮೋಹಿತ್ ಶರ್ಮಾ 48ಕ್ಕೆ4)
ಭಾರತ ಎ 38 ಓವರುಗಳಲ್ಲಿ 4 ವಿಕೆಟ್ಗೆ 218 (ಮನನ್ ವೊಹ್ರಾ 88, ಅಂಬಟಿ ರಾಯುಡು ಅಜೇಯ 70, ಬೆಹ್ರೆಂಡ್ರೊಫ್ 50ಕ್ಕೆ2)