ಜುಡೊದಲ್ಲಿ ಎರಡು ರಜತ
ಗ್ಲಾಸ್ಗೊ: ಭಾರತದ ಜುಡೊ ಪಟುಗಳಾದ ಸುಶೀಲಾ ಲಿಕ್ಮಾಬಾಮ್ ಮತ್ತು ನವಜೋತ್ ಚಾನಾ ಅವರು ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನ ಕ್ರಮವಾಗಿ ಮಹಿಳೆ ಮತ್ತು ಪರುಷರ ವಿಭಾಗದಲ್ಲಿ ಪದಕ ಗೆದ್ದುಕೊಟ್ಟರು.
ಚಿನ್ನ್ನಕ್ಕಾಗಿ ಫೈನಲ್ನಲ್ಲಿ ನಡೆದ ಹೋರಾಟದಲ್ಲಿ ಸೋಲನುಭವಿಸಿದ್ದು, ಈ ಇಬ್ಬರು ಬೆಳ್ಳಿಗೆ ತೃಪ್ತಿಪಡುವಂತಾಯಿತು.
ಮಹಿಳೆಯರ ವಿಭಾಗದಲ್ಲಿ ಮಣಿಪುರದ ಜುಡೊಪಟು ಸುಶೀಲಾ ಲಿಕ್ಮಾಬಾಮ ಅವರು 48ಕೆಜಿ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ನ ಕಿಂಬೆರ್ಲಿ ರೆನಿಕ್ಸ್ ವಿರುದ್ಧ ಸೋಲನುಭವಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಚ್ಲೋಯಿ ರೇನರ್ ಅವರನ್ನು ಪರಾಭವಗೊಳಿಸುವ ಮೂಲಕ ಲಿಕ್ಮಾಬಾಮ್ ಅವರು ಫೈನಲ್ ಪ್ರವೇಶಿಸಿದ್ದರು.
ನವಜೋತ್ ಚಾನಾ ಅವರು ಪುರುಷರ 60ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ನ ಆ್ಯಶ್ಲಿ ಮೆಕೆಂಜೀ ವಿರುದ್ಧ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ್ನ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾದ ಡ್ಯಾನಿಯಲ್ ಲಿ ಗ್ರಾಂಗ್ ಅವರನ್ನು ಸೋಲಿಸಿದ್ದರು. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕಠಿಣ ಸವಾಲು ಎದುರಿಸಿದ ಚಾನಾ ವೇಲ್ಸ್ನ ಬ್ರಾಂಡನ್ ಡೊಡ್ಗೆ ಅವರನ್ನು ಪರಾಭವಗೊಳಿಸಿದರು.
ಇನ್ನು ಮಹಿಳೆಯರ 52ಕೆಜಿ ವಿಭಾಗದಲ್ಲಿ ಕಲ್ಪನಾ ಥೌಂಡಮ್ ಕಂಚಿನ ಪದಕ ಗೆದ್ದುಕೊಳ್ಳುವುದರೊಂದಿಗೆ ಭಾರತ ಕ್ರೀಡಾಕೂಟದಲ್ಲಿ ತನ್ನ್ನ 5ನೇ ಪದಕ ಗೆದ್ದುಕೊಂಡಿತು. ಆದರೆ, ಪುರುಷರ 66ಕೆಜಿ ವಿಭಾಗದಲ್ಲಿ ಮಂಜೀತ್ ನಂದಾಲ್ ಅವರು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಿದ್ದಾರೆ.