ಟೇಬಲ್ ಟೆನಿಸ್ ಭಾರತ ಶುಭಾರಂಭ
ಗ್ಲಾಸ್ಗೊ: ನಿರೀಕ್ಷೆಯಂತೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಟೇಬಲ್ ಟೆನಿಸ್ಪಟುಗಳು ಶುಭಾರಂಭ ಮಾಡಿದ್ದಾರೆ.
ಗುರುವಾರ ಸ್ಕಾಟ್ಸ್ಟೌನ್ ಸ್ಪೋರ್ಟ್ಸ್ ಕ್ಯಾಂಪಸ್ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರರು ಕ್ರಮವಾಗಿ ವನುವಟು ಹಾಗೂ ಬಾರ್ಬಡೊಸ್ ವಿರುದ್ಧ ಗೆಲವು ದಾಖಲಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ಭಾರತದ ಮಹಿಳೆಯರು ದೆಹಲಿ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದ ಆಟಗಾರ್ತಿಯನ್ನು ಅಚ್ಚರಿ ರೀತಿಯಲ್ಲಿ ಮಣಿಸಿದರು. ಈ ಮೂಲಕ ಬಾರ್ಬಡೊಸ್ ವಿರುದ್ಧ 3-0 ಅಂತರದಲ್ಲಿ ಗೆಲವು ದಾಖಲಿಸಿದರು. ಭಾರತದ ಪರ ಶಾಮಿನಿ ಕುಮಾರಸನ್, ಮನಿಕಾ ಬಾತ್ರಾ ಮತ್ತು ಮಧುರಿಕಾ ಪಟ್ಕರ್ ಗೆಲವು ದಾಖಲಿಸಿದರು.
ಇನ್ನು ವನುವಟು ವಿರುದ್ಧ ಭಾರತದ ಪುರುಷರು ಮೇಲುಗೈ ಸಾಧಿಸಿದರು. ಪ್ರಮುಖ ಆಟಗಾರ ಶರತ್ ಕಮಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ತಂಡದ ಪರ ಹರ್ಮಿತ್ ದೇಸಾಯ್ ಮೊದಲ ಸಿಂಗಲ್ಸ್ನಲ್ಲಿ ಹಾಮ್ ಲುಲು ವಿರುದ್ಧ 11-2, 11-3, 11-5 ಅಂಕಗಳಿಂದ ಜಯಿಸಿದರು. ಸನಿಲ್ ಶೆಟ್ಟಿ ಅವರು ಯೊಶುಹಾ ಸಿಂಗ್ ವಿರುದ್ಧ 11-6, 11-2, 7-11, 11-1ರಿಂದ ಗೆದ್ದರು.
ಡಬಲ್ಸ್ ವಿಭಾಗದಲ್ಲಿ ಜತೆಯಾದ ಸನಿಲ್ ಶೆಟ್ಟಿ ಹಾಗೂ ಆಂಥೋನಿ ಅಮಲ್ರಾಜ್ ಎದುರಾಳಿ ಜೋಡಿ, ಆ್ಯಲನ್ ಲಿನ್ ಮತ್ತು ಶಿಂಗ್ ಜೋಡಿ ವಿರುದ್ಧ 11-6, 11-5, 11-4 ಅಂತರದಿಂದ ಮಣಿಸುವ ಮೂಲಕ, ತಂಡಕ್ಕೆ 3-0 ಅಂತರದ ಗೆಲವು ತಂದುಕೊಟ್ಟರು.