ಬಾಕ್ಸರ್ಗಳಿಗೆ ಅಗ್ನಿ ಪರೀಕ್ಷೆ
ಗ್ಲಾಸ್ಗೊ: ಕಳೆದ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತೀಯ ಬಾಕ್ಸರ್ಗಳು, ಮತ್ತೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ತಯಾರಾಗಿದ್ದಾರೆ. ಹಾಗಾಗಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಬಾಕ್ಸರ್ಗಳು ಶುಕ್ರವಾರದಿಂದ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಕಳೆದ ಬಾರಿಯ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತವರು ಅಭಿಮಾನಿಗಳ ಬೆಂಬಲದೊಂದಿಗೆ 3 ಚಿನ್ನ, 4 ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಬಾಚಿಕೊಂಡಿದ್ದ ಭಾರತ, ಈ ಬಾರಿಯೂ ಅದೇ ರೀತಿಯ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ಈ ಬಾರಿ ಆಡಳಿತ ಅಧಿಕಾರಿಗಳ ಗೊಂದಲದಿಂದ ಭಾರತೀಯ ಬಾಕ್ಸಿಂಗ್ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನರ್ಹಗೊಳಿಸಿರುವುದು. ಆಟಗಾರನ್ನು ಒತ್ತಡಕ್ಕೆ ಸಿಲುಕಿಸಿದೆ. ಅಲ್ಲದೆ ಸದ್ಯದ ಮಟ್ಟಿಗೆ ಭಾರತೀಯ ಬಾಕ್ಸಿಂಗ್ ಸಂಸ್ಥೆಯ ಸಮಸ್ಯೆಗೆ ಪರಿಹಾರ ದೊರೆಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಬಾಕ್ಸಿಂಗ್ ಪಡೆಯಲ್ಲಿ 7 ಪುರುಷ ಹಾಗೂ 3 ಮಹಿಳಾ ಬಾಕ್ಸರ್ಗಳಿದ್ದು, ಪದಕದ ಬೇಟೆಯಾಡಲು ಸಜ್ಜಾಗಿದ್ದಾರೆ. ಈ ತಂಡದಲ್ಲಿ ಪುರುಷರ ವಿಭಾಗದಲ್ಲಿ ಮನೋಜ್ ಕುಮಾರ್ (64 ಕೆ.ಜಿ) ಹಾಗೂ ಒಲಿಂಪಿಯನ್ ವಿಜೇಂದ್ರ ಸಿಂಗ್ (75 ಕೆ.ಜಿ) ಕಳೆದ ಆವೃತ್ತಿಯಲ್ಲಿ ಪದಕ ಗೆದ್ದಿದ್ದ ಬಾಕ್ಸರ್ಗಳಾಗಿದ್ದಾರೆ.