ಲಂಕೆಗೆ ಮಹೆಲ ಶತಕದ ಆಸರೆ
ಕೊಲಂಬೊ: ತನ್ನ ನೆಚ್ಚಿನ ಅಂಗಣದಲ್ಲಿ ಮತ್ತೊಮ್ಮೆ ಅಬ್ಬರಿಸಿದ ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಹೆಲ ಜಯವರ್ದನೆ ಮತ್ತೊಂದು ಶತಕ ದಾಖಲಿಸುವ ಮೂಲಕ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.
ಗುರುವಾರ ಸಿಂಹಳೆಸೆ ಸ್ಪೊರ್ಟಿಂಗ್ ಕ್ಲಬ್ ಅಂಗಣದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 305 ರನ್ ದಾಖಲಿಸಿತು. ಈ ಮೂಲಕ ಲಂಕಾ ಬೃಹತ್ ಮೊತ್ತ ಕಲೆ ಹಾಕುವ ನಿಟ್ಟಿನಲ್ಲಿ ಸಾಗಿದೆ.
ಮಿಂಚಿದ ಮಹೆಲಾ: ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜತೆಯಾದ ಕುಶಾಲ ಸಿಲ್ವಾ (44) ಹಾಗೂ ಮಹೆಲ ಜಯವರ್ದನೆ 99 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.
ನಂತರ ಜಯವರ್ದನೆಗೆ ಸಾಥ್ ನೀಡಿದ ಆ್ಯಂಜಲೊ ಮ್ಯಾಥ್ಯೂಸ್ (63) 4ನೇ ವಿಕೆಟ್‌ಗೆ 131 ರನ್‌ಗಳ ಶತಕದ ಜತೆಯಾಟ ನೀಡುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಯತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರು. 63 ರನ್ ದಾಖಲಿಸಿದ ಮ್ಯಾಥ್ಯೂಸ್, ಡುಮಿನಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಶ್ರೀಲಂಕಾದ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಮಹೆಲ ಜಯವರ್ದನೆ 16 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 140 ರನ್ ದಾಖಲಿಸಿದ್ದಾರೆ.
ಜಯವರ್ದನೆ ಈ ಅಂಗಣದಲ್ಲಿ 11ನೇ ಶತಕ ದಾಖಲಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 34ನೇ ಶತಕ ಪೂರೈಸಿರುವ ಮಹೆಲಾ, ಅತಿ ಹೆಚ್ಚು ಟೆಸ್ಟ್ ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಹಾಗೂ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಜತೆಗೆ ಜಂಟಿ 5ನೇ ಸ್ಥಾನ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್ 5 ವಿಕೆಟ್‌ಗೆ 305
(ಮಹೆಲ ಜಯವರ್ದನೆ ಬ್ಯಾಟಿಂಗ್ 140, ಮ್ಯಾಥ್ಯೂಸ್ 63, ಕುಶಾಲ ಸಿಲ್ವಾ 44, ಡೇಲ್ ಸ್ಟೇಯ್ನ್ 55ಕ್ಕೆ2)