ವೇಲ್ಸ್ ಗೆಲ್ಲುವ ನಿರೀಕ್ಷೆ
ಗ್ಲಾಸ್ಗೊ: ಇತ್ತೀಚೆಗೆ ಹಾಲೆಂಡ್ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋಲಿನ ಕಹಿ ಉಂಡ ಭಾರತ ಹಾಕಿ ತಂಡ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ಸಂಭ್ರಮ ಆಚರಿಸಲು ಎದುರು ನೋಡುತ್ತಿದೆ.
ಶುಕ್ರವಾರ ನಡೆಯಲಿರುವ ಕ್ರೀಡಾಕೂಟದ ತನ್ನ ಮೊದಲ ಪಂದ್ಯದಲ್ಲಿ ಭಾರತ, ದುರ್ಬಲ ವೇಲ್ಸ್ ವಿರುದ್ಧ ಸೆಣಸಲಿದೆ. ಭಾರತ, ವೇಲ್ಸ್ ತಂಡಗಳಿರುವ 'ಎ' ಗುಂಪು ಸ್ಕಾಟ್ಲೆಂಡ್, ದಕ್ಷಿಣ ಕೊರಿಯಾ ಹಾಗೂ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳನ್ನು ಹೊಂದಿದೆ. ಸರ್ದಾರ್ ಸಿಂಗ್ ನಾಯಕತ್ವದ ಭಾರತ, ಮೊದಲೆರಡು ಪಂದ್ಯಗಳಲ್ಲಿ ಸುಲಭವಾಗಿ ಜಯಿಸುವ ನಿರೀಕ್ಷೆಯಲ್ಲಿದೆ. ಆದರೆ, ನಂತರದ ಪಂದ್ಯಗಳಲ್ಲಿ ಕೊಂಚ ಕಠಿಣ ಸವಾಲು ಎದುರಾಗುವ ಸಾಧ್ಯತೆಗಳಿವೆ.
ಭಾರತ ಜುಲೈ 26ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಜುಲೈ 29ರಂದು ದೈತ್ಯ ಆಸ್ಟ್ರೇಲಿಯಾ ಹಾಗೂ ಜುಲೈ 31ರಂದು ತನ್ನ ಕೊನೆ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಭಾರತ ತಂಡ ವೇಲ್ಸ್ ಮತ್ತು ಸ್ಕಾಟ್ಲೆಂಡ್ ವಿರುದ್ಧ ಭಾರೀ ಅಂತರದ ಜಯ ಸಾಧಿಸುವ ನಿರೀಕ್ಷೆ ಹೊಂದಲಾಗಿದೆ. ಇದು ನಂತರ ಆಸ್ಟ್ರೇಲಿಯಾದಂತಹ ದೈತ್ಯ ತಂಡಗಳ ವಿರುದ್ಧ ಹೋರಾಡಲು ತಂಡಕ್ಕೆ ವಿಶ್ವಾಸ ತುಂಬಲಿದೆ.