ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚಿನ್ನಕ್ಕೆ ಗುರಿ ಇಟ್ಟ ಬಿಂದ್ರಾ

ಮೊದಲ ದಿನವೇ ಭಾರತದ ಪದಕಗಳ ಬೇಟೆ ಯಶಸ್ವಿಯಾಗಿ ಆರಂಭಗೊಂಡಿದೆ

Vishwanath S
Updated On : 26 Jul 2014, 10:02 am

ಗ್ಲಾಸ್ಗೋ: ನಿರೀಕ್ಷೆಯಂತೆ ಶೂಟಿಂಗ್ ಸ್ಪರ್ಧೆಗಳಲ್ಲಿ ಮೊದಲ ದಿನವೇ ಭಾರತದ ಪದಕಗಳ ಬೇಟೆ ಯಶಸ್ವಿಯಾಗಿ ಆರಂಭಗೊಂಡಿದೆ. ಸ್ಟಾರ್ ಗುರಿಕಾರ ಅಭಿನವ್ ಬಿಂದ್ರಾ ಚಿನ್ನದ ಪದಕಕ್ಕೆ ಸಮರ್ಥ ಗುರಿ ನೆಟ್ಟರೆ, ಮಲೈಕಾ ಗೋಯಲ್ ರಜತ ಪದಕಕ್ಕೆ ತಮ್ಮ ಸಾಧನೆಯನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಇದರೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳ ಪಟ್ಟಿಯಲ್ಲಿ ಭಾರತ ಒಂದೊಂದೇ ಹೆಜ್ಜೆ ಮೇಲೇಡಿತ್ತಿದೆ.
ಶುಕ್ರವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ ಬಿಂದ್ರಾ ಫೈನಲ್‌ನಲ್ಲಿ ದಾಖಲೆಯ 205.3 ಅಂಕಗಳ ಸಂಪಾದನೆಯೊಂದಿಗೆ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಬಿಂದ್ರಾರ ಮೊದಲ ವೈಯಕ್ತಿಕ ಚಿನ್ನದ ಪದಕವಾಗಿರುವುದು ವಿಶೇಷ. ಈ ಮುನ್ನ ಅವರು ಮ್ಯಾಂಚೆಸ್ಟರ್ (2002), ಮೆಲ್ಬೋರ್ನ್ (2006) ಹಾಗೂ ನಾಲ್ಕು ವರ್ಷಗಳ ಹಿಂದೆ ದೆಹಲಿ  (2010) ಕೂಟದಲ್ಲಿ ಅವರು ಜೋಡಿ ವಿಭಾಗಗಳಲ್ಲಿ ಮಾತ್ರ ಚಿನ್ನದ ಪದಕ ಸಂಪಾದಿಸಿದ್ದರು. ರವಿಕುಮಾರ್‌ಗೆ 4ನೇ ಸ್ಥಾನ ಲಭಿಸಿದೆ.
ಟಿ ಮಲೈಕಾಗೆ ಬೆಳ್ಳಿ
ಈ ಮಧ್ಯೆ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮಲೈಕಾ ಗೋಯಲ್ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದ್ದಾರೆ. ಇಂದೇ ನಡೆದ ಈ ಸ್ಪರ್ಧೆಯಲ್ಲಿ 16ರ ಮಲೈಕಾ ಫೈನಲ್‌ನಲ್ಲಿ 197.1 ಅಂಕಗಳ ಸಾಧನೆಯೊಂದಿಗೆ ಎರಡನೇ ಸ್ಥಾನದ ಗೌರವ ಪಡೆದರು.  ಸಿಂಗಾಪುರದ ಶಾನ್ ಕ್ಷಿಯಿ ಟೇಯೊ 198.6 ಅಂಕಗಳಿಸಿ ಚಿನ್ನದ ಪದಕ ಗೆದ್ದುಕೊಂಡರೆ, ಕೆನಡಾದ ದೋರೋಟಿ ಲುಡ್‌ವಿಗ್ (117.2 ಅಂಕ) ಮೂರನೇ ಸ್ಥಾನ ಪಡೆದರು.
ಆದರೆ ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತವರಿನ ಅಗ್ರಮಾನ್ಯ ಆಟಗಾರ್ತಿ ಹೀನಾ ಸಿಧು ನೀರಸ ಪ್ರದರ್ಶನ ನೀಡಿ 7ನೇ ಸ್ಥಾನ ಪಡೆದಿದ್ದು ಭಾರಿ ನಿರಾಸೆ ಮೂಡಿಸಿತು. ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಹೀನಾ, ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದ ಅಂತಿಮ 8 ಆಟಗಾರ್ತಿಯರ ಪೈಕಿ ಎರಡನೇ ಸ್ಥಾನದಲ್ಲಿದ್ದರು. ಆದರೆ, ಪದಕದ ಬೇಟೆಯ ಹೋರಾಟದಲ್ಲಿ ಮಾತ್ರ ಕಳಪೆ ಗುರಿ ನೆಟ್ಟು ಪದಕದಿಂದ ದೂರ ಉಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement