ಹಾಕಿ ತಂಡದ ಶುಭಾರಂಭ
ಗ್ಲಾಸ್ಗೋ: ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತದ ಪುರುಷರೂ ಸಹ ಭರ್ಜರಿ ಆರಂಭ ಪಡೆಯುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಆಸೆಗೆ ಉತ್ತಮ ಚಾಲನೆ ಪಡೆದುಕೊಂಡಿದ್ದಾರೆ.
ಶುಕ್ರವಾರ ನಡೆದ 'ಎ' ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡದ ಆಟಗಾರರು 3-1 ಗೋಲುಗಳಿಂದ ತನಗಿಂತಲೂ ಕೆಳಕ್ರಮಾಂಕದ ವೇಲ್ಸ್ ತಂಡದ ವಿರುದ್ಧ ಜಯಗಳಿಸಿದರು. ಭಾರತ ತಂಡದ ಪರ ವಿ.ಆರ್. ರಘುನಾಥ್ ಪಂದ್ಯದ 20ನೇ ನಿಮಿಷದಲ್ಲಿ ಗೋಲುಗಳಿಸಿ ಭಾರತದ ಪರ ಖಾತೆ ತೆರೆದರು. ಆದರೆ, ಮೂರು ನಿಮಿಷಗಳ ಅಂತರದಲ್ಲಿ ಆ್ಯಂಡ್ರ್ಯೂ ಕಾರ್ನಿಕ್ (23ನೇ ನಿಮಿಷ) ಅವರು ವೇಲ್ಸ್ ಪರ ಗೋಲು ಗಳಿಸುವುದರೊಂದಿಗೆ ವಿರಾಮದ ವೇಳೆಗೆ ಉಭಯ ತಂಡಗಳು 1-1ರಿಂದ ಸಮಗೌರವ ಸಾಧಿಸಿದವು.
ಇನ್ನು ಎರಡನೇ ಅವಧಿಯ ಆಟದಲ್ಲಿ ಮಾತ್ರ ಭಾರತೀಯರು ಆಕ್ರಮಣಕಾರಿ ಹೋರಾಟಕ್ಕೆ ಮುಂದಾಗಿ ಎದುರಾಳಿ ಕೋಟೆಯ ಮೇಲೆ ನಿರಂತರ ದಂಡೆತ್ತಿ ಹೋಗುವ ಮೂಲಕ ಉತ್ತಮ ಫಲಗಳನ್ನೇ ಪಡೆದರು.
ಪಂದ್ಯದ 42ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ರೂಪಿಂದರ್ ಪಾಲ್ ಸಿಂಗ್ ಗೋಲು ದಾಖಲಿಸಿ ಭಾರತಕ್ಕೆ ಮತ್ತೆ 2-1ರಿಂದ ಮುನ್ನಡೆ ತಂದುಕೊಟ್ಟರು. ಇದಾದ ಐದು ನಿಮಿಷಗಳ ಅಂತರದಲ್ಲಿ ಗುರ್ವಿಂದರ್ ಚಾಂಡಿ (47ನೇ ನಿಮಿಷ) ಗೋಲು ಸಂಪಾದಿಸಿ ಭಾರತಕ್ಕೆ ನಿಚ್ಚಳ ಗೆಲವು ಖಚಿತಪಡಿಸಿದರು.
ಭಾರತದ ಆಟಗಾರರು ಶನಿವಾರ ತಮ್ಮ ಎರಡನೇ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದ್ದು, ಜುಲೈ 29ರಂದು ವಿಶ್ವ ಚಾಂಪಿಯನ್ ಹಾಗೂ ಹಾಲಿ ಚಿನ್ನದ ಪದಕ ವಿಜೇತ ಆಸ್ಟ್ರೇಲಿಯಾ ತಂಡದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ.