ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಪೂರ್ವಿ ಬಂಗಾರ, ಅಯೋನಿಕಾಗೆ ಬೆಳ್ಳಿ ಗರಿ

ನಿರೀಕ್ಷೆಯಂತೆ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಖಾತೆಗೆ ಒಂದೊಂದೇ...

Vishwanath S
Updated On : 27 Jul 2014, 2:10 am

ಗ್ಲಾಸ್ಗೋ: ನಿರೀಕ್ಷೆಯಂತೆ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಖಾತೆಗೆ ಒಂದೊಂದೇ ಪದಕಗಳು ಸೇರ್ಪಡೆಯಾಗುತ್ತಿವೆ.
ರಾಜಸ್ಥಾನದ ಬಾಲಕಿ ಅಪೂರ್ವಿ ಚಂಡೇಲಾ ಶೂಟಿಂಗ್‌ನಲ್ಲೇ ಭಾರತಕ್ಕೆ ಎರಡನೇ ಚಿನ್ನದ ಪದಕ ಸಂಪಾದಿಸಿಕೊಟ್ಟಿದ್ದಾರೆ. ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ 206.7 ಅಂಕಗಳ ಸಾಧನೆಯೊಂದಿಗೆ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡರು.
ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅಯೋನಿಕಾ ಪೌಲ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಯೋನಿಕಾ, 204.9 ಅಂಕಗಳಿಸಿ ಈ ಸಾಧನೆ ಮಾಡಿದರು.
ಮೊದಲ ಹತ್ತು ಹೊಡೆತಗಳು ಪೂರ್ಣಗೊಂಡಾಗ ಅಯೋನಿಕಾ ಪದಕದ ಪೈಪೋಟಿಯಲ್ಲಿಯೇ ಇರಲಿಲ್ಲ. ಆದರೆ, ನಂತರದಲ್ಲಿ ಉತ್ತಮ ಗುರಿ ನೆಡುವ ಮೂಲಕ ಅಂತಿಮವಾಗಿ ಎರಡನೇ ಸ್ಥಾನದ ಹೆಗ್ಗಳಿಕೆಯೊಂದಿಗೆ ರಜತ ಪದಕವನ್ನು ತಮ್ಮದಾಗಿಸಿಕೊಂಡು ಸಂಭ್ರಮಿಸಿದರು.

ಬೆಳ್ಳಿ ಪ್ರಕಾಶ
ಹೆಮ್ಮೆ ತಂದ ಕನ್ನಡಿಗ

ಗ್ಲಾಸ್ಗೋ: ಭಾರತದ ಪ್ರಕಾಶ್ ನಂಜಪ್ಪ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ತನ್ನ ಮೂರನೇ ಪದಕ ಗೆದ್ದ ಸಾಧನೆ ಮಾಡಿದೆ. ಕರ್ನಾಟಕದ ಮೂಲದ ಹೆಮ್ಮೆಯ ಗುರಿಕಾರ ಪ್ರಕಾಶ್ ನಂಜಪ್ಪ, ಶನಿವಾರ ನಡೆದ ಸ್ಪರ್ಧೆಯಲ್ಲಿ 198.2 ಅಂಕಗಳಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ಈ ಗೌರವ ಸಂಪಾದಿಸಿದರು.
ಹಾಗೆ ನೋಡಿದರೆ, ಬೆಂಗಳೂರಿನ ಹುಡುಗ ಚಿನ್ನದ ಪದಕಕ್ಕೆ ನೇರವಾಗಿ ಗುರಿ ನೆಡುವ ಮೂಲಕ ನಿರೀಕ್ಷೆಯಂತೆ ಯಶಸ್ಸನ್ನೇ ಕಂಡಿದ್ದರು. ಅರ್ಹತಾ ಸುತ್ತಿನಲ್ಲಿ ಅಗ್ರಮಾನ್ಯನಾಗಿ ಫೈನಲ್ ತಲುಪಿದ್ದ ಅವರು, ಚಿನ್ನದ ಪದಕ ಗೆದ್ದುಕೊಳ್ಳುವರೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ಫೈನಲ್‌ನಲ್ಲಿ ಏಕಚಿತ್ತತೆ ಕಳೆದುಕೊಂಡು ಕೊಂಚ ಒತ್ತಡಕ್ಕೆ ಬಿದ್ದು, ತಪ್ಪು ಗುರಿ ನೆಡುವ ಮೂಲಕ ತಮ್ಮ ಕೈಯಾರೆಯೇ ಚಿನ್ನದ ಪದಕ ಗೆದ್ದುಕೊಳ್ಳುವ ಅತ್ಯುತ್ತಮ ಅವಕಾಶವನ್ನು ಕಳೆದುಕೊಂಡರು.
ಎಲಿಮಿನೇಷನ್ ಹಂತದ ಆರನೇ ಪ್ರಯತ್ನದಲ್ಲಿ 38ರ ನಂಜಪ್ಪ ಎಸಗಿದ ತಪ್ಪಿನ ಲಾಭ ಪಡೆದ ಆಸ್ಟ್ರೇಲಿಯಾದ ಡ್ಯಾನಿಯಲ್ ರೆಪಾಚೋಲಿ ಅಂತಿಮವಾಗಿ 199.5 ಅಂಕಗಳ ಸಾಧನೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇಂಗ್ಲೆಂಡ್‌ನ 60ರ ಹಿರಿಯ ಗುರಿಕಾರ ಮೈಕೆಲ್ ಗೌಲ್ಟ್ ಕಂಚಿನ ಪದಕಕ್ಕೆ ಸಮಾಧಾನಗೊಂಡರು.
ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೊಬ್ಬ ಗುರಿಕಾರ ಓಂ ಪ್ರಕಾಶ್ ಫೈನಲ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲರಾದರು.
ಬೆಂಗಳೂರಿನ ಪ್ರಕಾಶ್ ನಂಜಪ್ಪ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಮೂಲತಃ ಬೈಕ್ ರ್ಯಾಲಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಪ್ರಕಾಶ್ ನಂಜಪ್ಪ ಅವರು, 1999ರಲ್ಲಿ ಶೂಟಿಂಗ್ ಪ್ರಾರಂಭಿಸಿದರು. ನಂತರ 2003ರಿಂದ 2009ರವರೆಗೆ ಕೆನಡಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ ಪ್ರಕಾಶ್ ನಂತರ ಭಾರತಕ್ಕೆ ಮರಳಿ ಕ್ರೀಡೆಯ ಬಗ್ಗೆ ಹೆಚ್ಚು ಒಲವು ತೋರಿದರು.
ನಂಜಪ್ಪ 2003ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದರು. ಅದೇ ವರ್ಷ ಗ್ರನಾಡದಲ್ಲಿನ ವಿಶ್ವಕಪ್ ಸಂದರ್ಭದಲ್ಲಿ ತಮ್ಮ ಮುಖದ ಬಲಭಾಗಕ್ಕೆ ಪಾರ್ಶ್ವವಾಯುವಿಗೆ ಸಿಲುಕಿದರು. ನಂತರ ಇದರಿಂದ ಚೇತರಿಸಿಕೊಂಡು 2013ರಲ್ಲಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದರು. 2013ರ ತೆಹ್ರಾನ್‌ನಲ್ಲಿ ನಡೆದ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದರು.

ಜುಡೊ: ಕಂಚಿನತ್ತ ನಾಲ್ವರು
ಗ್ಲಾಸ್ಗೋ:
ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತೀಯ ಜುಡೊ ಪಟುಗಳು ಕಾಮನ್‌ವೆಲ್ತ್ ಕ್ರೀಡಾಕೂಟದ ಮೂರನೇ ದಿನ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ವಿಭಾಗದಲ್ಲಿ ಜಿನಾ ದೇವಿ ಚೊಂಗ್ಟಮ್ (78 ಕೆ.ಜಿ) ಮತ್ತು ರಾಜ್‌ವಿಂದರ್ ಕೌರ್ (78ಕ್ಕೂ ಹೆಚ್ಚು ಕೆ.ಜಿ) ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಸಾಹಿಲ್ ಪಥಾನಿಯಾ (100 ಕೆ.ಜಿ) ಮತ್ತು ಪ್ರವೀಣ್ ಕುಮಾರ್ (100ಕ್ಕೂ ಹೆಚ್ಚು ಕೆ.ಜಿ) ಕಂಚಿನ ಪದಕಕ್ಕಾಗಿ ಕಾದಾಟ ನಡೆಸಲಿದ್ದಾರೆ.  ಫಥಾನಿಯಾ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಟಿಮ್ ಸ್ಲಿಫೀಲ್ಡ್ ವಿರುದ್ಧ, ಪ್ರವೀಣ್ ಆಸ್ಟ್ರೇಲಿಯಾದ ಜ್ಯಾಕ್ ಆ್ಯಂಡ್ರೂವರ್ಥ ವಿರುದ್ಧ ಕಾದಾಡಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಜಿನಾ ಹಾರ್ಟೆಂನ್ಸೆ ಮಬಲ್ಲಾ ವಿರುದ್ಧ ಹಾಗೂ ರಾಜ್‌ವಿಂದರ್ ಕೌರ್ ಕೀನ್ಯಾದ ಎಸ್ಟರ್ ಅಕಿನಿಯಿ ರಟುಗಿ ಜತೆ ಸೆಣೆಸಲಿದ್ದಾರೆ.

ಕಿವೀಸ್ ಹಿಂಡಿದ ಭಾರತ
ಗ್ಲಾಸ್ಗೋ:
ಭಾರತದ ಮಹಿಳಾ ಟೇಬಲ್ ಟೆನಿಸ್‌ಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಸುಲಭ ಗೆಲವು ದಾಖಲಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಪರ ಶಾಮಿನಿ ಕುಮಾರೆಸನ್ ಎದುರಾಳಿ ಚುನ್ ಲಿ ವಿರುದ್ಧ 5-11, 11-9, 11-5, 11-5 ಅಂತರದ ಗೆಲವು ದಾಖಲಿಸಿ ತಂಡಕ್ಕೆ ಶುಭಾರಂಭ ನೀಡಿದರು. ನಂತರ ಮನಿಕಾ ಭಾತ್ರಾ, ಕರೆನ್ ವಿರುದ್ಧ 11-13, 11-9, 11-5, 11-5 ಅಂತರದ ಮೇಲುಗೈ ಸಾಧಿಸಿದರು. ಅಂತಿಮವಾಗಿ ಡಬಲ್ಸ್ ವಿಭಾಗದಲ್ಲಿ ಶಾಮಿನಿ ಹಾಗೂ ಮಧುರಿಕಾ ಎದುರಾಳಿ ಜೋಡಿ ಕರೆನ್ ಹಾಗೂ ಯಾಂಗ್ ಸನ್ ವಿರುದ್ಧ 11-8, 11-8, 11-8 ಅಂತರದ ಗೆಲವು ದಾಖಲಿಸಿದರು.

ಪದಕ ಪಟ್ಟಿ (ಅಗ್ರ 5 ತಂಡ)
ದೇಶ                 ಬಂಗಾರ       ಬೆಳ್ಳಿ        ಕಂಚು       ಒಟ್ಟು
ಇಂಗ್ಲೆಂಡ್              13            11            11           35
ಆಸ್ಟ್ರೇಲಿಯಾ         12             9             14           35
ಸ್ಕಾಟ್ಲೆಂಡ್             7               5              5            17
ಕೆನಡಾ                 7               1               5            13
ಭಾರತ                 4               6              3             13

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement