ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐಎಎಎಫ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ನವಜೀತ್ ಕೌರ್‌ಗೆ ಕಂಚು

Vishwanath S
Updated On : 27 Jul 2014, 1:23 am

ನವದೆಹಲಿ: ಭಾರತದ ಡಿಸ್ಕಸ್ ತಾರೆ ನವಜೀತ್ ಕೌರ್ ಧಿಲ್ಲಾನ್ ಅಮೆರಿಕದ ಯೂಗೆನಿಯಲ್ಲಿ ನಡೆದ ಐಎಎಎಫ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಸಾಧನೆ ಮಾಡಿದ ಕೇವಲ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದಾರೆ.
ಹೇವಾರ್ಡ್ ಅಂಗಣದಲ್ಲಿ ಕಳೆದ ರಾತ್ರಿ ನಡೆದ ಡಿಸ್ಕಸ್ ಸ್ಪರ್ಧೆಯಲ್ಲಿ 19ರ ನವಜೀತ್ ಕೌರ್ 56.36 ಮೀ. ದೂರದ ಸಾಧನೆಯೊಂದಿಗೆ ಮೂರನೇ ಸ್ಥಾನದ ಗೌರವ ಪಡೆದರು. ಇದು ಆಕೆಯ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿರುವುದು ಮತ್ತೊಂದು ವಿಶೇಷ. ಈ ಮುನ್ನ ಇದೇ ಸಾಲಿನ ಮೇ ತಿಂಗಳು ಚೆನ್ನೈನಲ್ಲಿ ನಡೆದ ಜೂನಿಯರ್ ಫೆಡರೇಷನ್ ಕಪ್‌ನಲ್ಲಿ 53.97 ಮೀ. ದೂರ ಡಿಸ್ಕಸ್ ಎಸೆದಿದ್ದು, ಆಕೆಯ ಉತ್ತಮ ಸಾಧನೆಯಾಗಿತ್ತು.
ಈ ಮುನ್ನ 2002ರಲ್ಲಿ ಜಮೈಕಾದ ಕಿಂಗ್ಸ್‌ಟನ್‌ನಲ್ಲಿ ನಡೆದ ಕೂಟದಲ್ಲಿ ಸೀಮಾ ಆ್ಯಂಟಿಲ್ ಕಂಚಿನ ಪದಕ ಜಯಿಸಿದ್ದರು. ಅಲ್ಲದೇ, ಇದಕ್ಕೂ ಮುನ್ನ ಸೀಮಾ, 2000ನೇ ಸಾಲಿನಲ್ಲಿ ಸ್ಯಾಂಟಿಯಾಗೊ ಡಿ ಚಿಲಿಯಲ್ಲಿ ನಡೆದ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರಾದರೂ, ಕೊನೆಗೆ ನಿಷೇಧಿತ ಉದ್ದೀಪನ ಔಷಧ ಸೇವನೆ ಪ್ರಕರಣದಿಂದಾಗಿ ಅನರ್ಹಗೊಂಡಿದ್ದರು.
ಬ್ರೆಜಿಲ್‌ನ ಇಜಾಬೆಲಾ ಡ ಸಿಲ್ವಾ ನೂತನ ವಿಶ್ವ ಜೂನಿಯರ್ ದಾಖಲೆಯೊಂದಿಗೆ (58.03ಮೀ.) ಚಿನ್ನದ ಪದಕ ಗೆದ್ದರೆ, ಅಮೆರಿಕದ ವಲಾರಿ ಅಲ್‌ಮಾನ್ (56.75ಮಿ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಘೋಶಾಲ್, ದೀಪಿಕಾ ದಾಖಲೆ
ಗ್ಲಾಸ್ಗೋ: ಭಾರತದ ಅಗ್ರಮಾನ್ಯ ಸ್ಕ್ವಾಶ್ ಪ್ರತಿಭೆಗಳಾದ ಸೌರವ್ ಘೋಶಾಲ್ ಮತ್ತು ದೀಪಿಕಾ ಪಳ್ಳಿಕಲ್ ತಮ್ಮ ಪಂದ್ಯಗಳಲ್ಲಿ ಕಠಿಣ ಗೆಲವು ದಾಖಲಿಸಿ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.
ನಾಲ್ಕನೇ ಶ್ರೇಯಾಂಕಿತ ಸೌರವ್ ಘೋಶಾಲ್ ತೀವ್ರ ಪೈಪೋಟಿಯಿಂದ ಕೂಡಿದ್ದ ಪ್ರಿಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಫಿನಿಟ್‌ಸಿಸ್ ವಿರುದ್ಧ 11-2, 11-5, 4-11, 6-11, 11-8 ಅಂಕಗಳಿಂದ ಜಯಗಳಿಸಿ ಮುಂದಡಿ ಇಟ್ಟರು.
ಈ ಗೆಲವಿನೊಂದಿಗೆ ಘೋಶಾಲ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಕ್ವಾಶ್ ಸ್ಪರ್ಧೆ ಸೇರ್ಪಡೆಯಾದ ನಂತರ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನಂತರ ನಡೆದ ಮಹಿಳೆಯರ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ ದೀಪಿಕಾ ಪಳ್ಳಿಕಲ್ 11-6, 12-10, 11-5ರಿಂದ 15ನೇ ಶ್ರೇಯಾಂಕಿತ ಮಲೇಷಿಯಾದ ಡೆಲಿಯಾ ಅರ್ನಾಲ್ಡ್ ಅವರನ್ನು ಮಣಿಸಿ ಮುನ್ನಡೆದರು. 40 ನಿಮಿಷಗಳ ಆಟದಲ್ಲಿಯೇ ಭಾರತೀಯ ಆಟಗಾರ್ತಿಗೆ ಗೆಲವು ಲಭಿಸಿತು.
ಈವರೆಗೆ ಭಾರತದ ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್‌ನ ಸ್ಕ್ವಾಶ್ ಸ್ಪರ್ಧೆಯಲ್ಲಿ ಯಾವುದೇ ಪದಕ ಗೆದ್ದುಕೊಂಡಿಲ್ಲ. ಆದರೆ, ಈ ಬಾರಿ ಘೋಶಾಲ್ ಮತ್ತು ದೀಪಿಕಾ ಮೇಲೆ ಪದಕದ ಆಸೆ ಹೆಚ್ಚಿದೆ.
ಮನೋಜ್ ಪ್ರಿಕ್ವಾರ್ಟರ್‌ಗೆ
ಗ್ಲಾಸ್ಗೋ: ಭಾರತದ ಮನೋಜ್ ಕುಮಾರ್ ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್ ವಿಭಾಗದಲ್ಲಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪುರುಷರ 64 ಕೆ.ಜಿ. ಲೈಟ್ ವೆಲ್ಟರ್ ವಿಭಾಗದಲ್ಲಿ ಮನೋಜ್ ಕಮಾರ್ ಅವರು 3-0 ಅಂಕಗಳ ಅಂತರದಲ್ಲಿ ಲೆಸೋಥೋದ ಮೊಖಚಾನೆ ಮೊಶೋಯೇಶೋ ಅವರನ್ನು ಪರಾಭವಗೊಳಿಸಿ ಮುನ್ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement