ಇಂಗ್ಲೆಂಡ್ ಬ್ಯಾಲೆನ್ಸ್ ಇಂಡಿಯಾ ಇಂಬ್ಯಾಲೆನ್ಸ್
ಲಾರ್ಡ್ಸ್ ಟೆಸ್ಟ್‌ನಲ್ಲಿ ಮೈಮರೆತಿದ್ದಕ್ಕೆ ಅವಮಾನಕಾರಿ ಸೋಲು ಅನುಭವಿಸಬೇಕಾಗಿದ್ದ...
ಸೌಥಾಂಪ್ಟನ್: ಲಾರ್ಡ್ಸ್ ಟೆಸ್ಟ್‌ನಲ್ಲಿ ಮೈಮರೆತಿದ್ದಕ್ಕೆ ಅವಮಾನಕಾರಿ ಸೋಲು ಅನುಭವಿಸಬೇಕಾಗಿದ್ದ ಇಂಗ್ಲೆಂಡ್ ಆಟಗಾರರು ಮೂರನೇ ಟೆಸ್ಟ್‌ನಲ್ಲಿ ಮಾತ್ರ ದಿಟ್ಟ ಹೆಜ್ಜೆ ಇಡುವ ಮೂಲಕ ಭಾರತದ ಮುಂದೆ ಕಠಿಣ ಸನ್ನಿವೇಶ ನಿರ್ಮಾಣ ಮಾಡುವತ್ತ ಸಾಗಿದ್ದಾರೆ.
ದಿ ರೋಸ್ ಬೌಲ್‌ನಲ್ಲಿ ಭಾನುವಾರ ಆರಂಭವಾದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ತಂಡ ಮೊದಲ ದಿನದಾಟ ನಿಂತಾಗ 90 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್‌ಗಳಿಸಿ ಉತ್ತಮ ನೆಲೆ ಕಂಡುಕೊಂಡಿತ್ತು. ಆಟ ನಿಂತಾಗ ಆಕರ್ಷಕ ಶತಕ ಬಾರಿಸಿರುವ ಗ್ಯಾರಿ ಬ್ಯಾಲೆನ್ಸ್ (ಬ್ಯಾಟಿಂಗ್ 104, 204 ಎಸೆತ, 15 ಬೌಂಡರಿ) ಹಾಗೂ ಇಯಾನ್ ಬೆಲ್ (ಬ್ಯಾಟಿಂಗ್ 16 ) ಅಜೇಯರಾಗುಳಿದಿದ್ದರು.
ಭಾರತದ ದಾಳಿಗೆ ತೀಕ್ಷ್ಣ ಉತ್ತರ ನೀಡಿದ ಬ್ಯಾಲೆನ್ಸ್ ಸತತ ಎರಡನೇ ಶತಕ ದಾಖಲಿಸಿದರು. ಕಳೆದ ಲಾರ್ಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೂಡ ಬ್ಯಾಲೆನ್ಸ್ ಮೂರಂಕಿಯ ಗಡಿ ದಾಟಿದ್ದರು.
ಬ್ಯಾಲೆನ್ಸ್ ಮತ್ತು ನಾಯಕ ಅಲಸ್ಟೇರ್ ಕುಕ್ (95ರನ್, 231 ಎಸೆತ, 9 ಬೌಂಡರಿ) ಎರಡನೇ ವಿಕೆಟ್ ಜೊತೆಯಾಟದಲ್ಲಿ 55.1 ಓವರುಗಳಲ್ಲಿ 158 ರನ್ ಪೇರಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, ಬಹುಪಂದ್ಯಗಳ ನಂತರ ಉತ್ತಮ ಫಾರ್ಮ್ ಪ್ರದರ್ಶಿಸಿದ ಕುಕ್ ಕೇವಲ ಐದು ರನ್‌ಗಳ ಅಂತರದಲ್ಲಿ ಶತಕವಂಚಿತರಾಗಿ ಪೆವಿಲಿಯನ್ ಸೇರಿದರು.
ಇದಕ್ಕೆ ಮುನ್ನ ಕುಕ್ ಜೊತೆ ಬ್ಯಾಟಿಂಗ್ ಆರಂಭಿಸಿದ್ದ ಸ್ಯಾಮ್ ರಾಬ್ಸನ್ ಕೇವಲ 26 ರನ್‌ಗಳಿಸಿ ವಿಕೆಟ್ ಕೈಚೆಲ್ಲಿದಾಗ ಇಂಗ್ಲೆಂಡ್ ಮೊತ್ತ 55 ರನ್‌ಗಳಾಗಿತ್ತು. ಮಧ್ಯಮ ವೇಗದ ಬೌಲರ್ ಮೊಹಮದ್ ಶಮಿ, ರಾಬ್ಸನ್ ವಿಕೆಟ್ ಪಡೆದು ಭಾರತಕ್ಕೆ ಮೊದಲ ಸಫಲತೆ ದೊರಕಿಸಿಕೊಡುವುದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಪಡೆ ಈ ಹಂತದಲ್ಲಿ ಮೇಲುಗೈ ಸಾಧಿಸಿದಂತಾಗಿತ್ತು. ಆದರೆ, ನಂತರದಲ್ಲಿ ಜೊತೆಯಾದ ಕುಕ್ ಮತ್ತು ಬ್ಯಾಲೆನ್ಸ್ ಭಾರತದ ದಾಳಿಯನ್ನು ಗೋಳು ಹೊಯ್ದುಕೊಳ್ಳುವುದರೊಂದಿಗೆ ಮತ್ತೆ ನಿರಾಸೆ ಉಂಟುಮಾಡಿತು.
13 ಇನಿಂಗ್ಸ್‌ಗಳಲ್ಲಿ ಕುಕ್ ಮೊದಲ ಬಾರಿಗೆ ಅರ್ಧಶತಕ ಬಾರಿಸಿದ್ದು ಅವರು ಬ್ಯಾಟಿಂಗ್ ವೈಫಲ್ಯದಿಂದ ಹೊರಬಂದುದಕ್ಕೆ ನಿದರ್ಶನವಾಯಿತು. ಈ ಪಂದ್ಯದಲ್ಲಿ ಕುಕ್‌ಗೆ ಅದೃಷ್ಟ ಸಾಥ್ ನೀಡಿತು. ಏಕೆಂದರೆ, ಅವರು ಕೇವಲ 15 ರನ್‌ಗಳಿಸಿದ್ದಾಗಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಬೇಕಾಗಿತ್ತು. ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದ ಮಧ್ಯಮ ವೇಗದ ಬೌಲರ್ ಪಂಕಜ್ ಸಿಂಗ್ ಎಸೆತವೊಂದನ್ನು ಕೆಣಕಿದ್ದ ಕುಕ್, ಮೊದಲ ಸ್ಲಿಪ್‌ನಲ್ಲಿದ್ದ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿದ್ದರು. ಆದರೆ, ಜಡೇಜಾ ಕ್ಯಾಚ್ ಅನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿ ಜೀವದಾನ ನೀಡಿದ್ದರಿಂದ ಕುಕ್, ನಂತರದ ಹಾದಿಯಲ್ಲಿ ತೀರ ಎಚ್ಚರಿಕೆ ವಹಿಸಿ ತಮ್ಮ ಉತ್ತಮ ಇನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು.
ಕುಕ್ ಮತ್ತು ಬ್ಯಾಲೆನ್ಸ್ ಜೋಡಿಯನ್ನು ಬೇಗನೆ ಮುರಿಯಲಾಗದೇ ಭಾರತದ ದಾಳಿಕಾರರು ಬಳಲಿದರು. ಎಡ ಹಿಮ್ಮಡಿ ನೋವಿನಿಂದಾಗಿ ಈ ಪಂದ್ಯದಿಂದ ಇಶಾಂತ್ ಶರ್ಮಾ ಹೊರಗುಳಿದಿರುವುದು ಭಾರಿ ನಷ್ಟ ತಂದುಕೊಟ್ಟಿತು. ಕೊನೆಗೆ ಸ್ಪಿನ್ನರ್ ರವೀಂದ್ರ ಜಡೇಜಾ, ಕುಕ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ನೆಮ್ಮದಿ ತಂದುಕೊಟ್ಟರು.
ಆದಾಗ್ಯೂ ಕೂಡ ಭಾರತದ ದಾಳಿಕಾರರು ದಿನದಾಟದಲ್ಲಿ ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಈ ಮಧ್ಯೆ ಇಶಾಂತ್ ಅನುಪಸ್ಥಿತಿಯಿಂದಾಗಿ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ಪಂಕಜ್ ಉತ್ತಮ ದಾಳಿಯನ್ನೇ ಸಂಘಟಿಸಿದರು.
ಭಾರತ ತಂಡದಲ್ಲಾದ ಮತ್ತೊಂದು ಬದಲಾವಣೆ ಎಂದರೆ, ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿಗೆ ಕೊಕ್ ನೀಡಿ ರೋಹಿತ್ ಶರ್ಮಾಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ ಇಂಗ್ಲೆಂಡ್ ತಂಡದಲ್ಲಿ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ ಬದಲು ತಂಡಕ್ಕೆ ಸೇರ್ಪಡೆಗೊಂಡಿರುವ ಜೋಸ್ ಬಟ್ಲರ್ ಸಹ ಈ ಪಂದ್ಯದಿಂದ ತಮ್ಮ ಟೆಸ್ಟ್ ವೃತ್ತಿ ಆರಂಭಿಸಿದರು.
ಸ್ಕೋರ್ ವಿವರ:
ಇಂಗ್ಲೆಂಡ್ ಮೊದಲ ಇನಿಂಗ್ಸ್ 90 ಓವರುಗಳಲ್ಲಿ 2 ವಿಕೆಟ್‌ಗೆ 247, ಅಲಸ್ಟೇರ್ ಕುಕ್ ಸಿ ಧೋನಿ ಬಿ ಜಡೇಜಾ 95, ಸ್ಯಾಮ್ ರಾಬ್ಸನ್ ಸಿ ಜಡೇಜಾ ಬಿ ಶಮಿ 26, ಗ್ಯಾರಿ ಬ್ಯಾಲೆನ್ಸ್ ಬ್ಯಾಟಿಂಗ್ 104, ಇಯಾನ್ ಬೆಲ್ ಬ್ಯಾಟಿಂಗ್ 16 ಇತರೆ: (ಬೈ-1, ಲೆಗ್‌ಬೈ-5) 6.
ವಿಕೆಟ್ ಪತನ: 1-55, 2-213.
ಬೌಲಿಂಗ್ ವಿವರ: ಭುವನೇಶ್ವರ್ ಕಮಾರ್ 22-7-58-0, ಮೊಹಮ್ಮದ್ ಶಮಿ 18-3-62-1, ಪಂಕಜ್ ಸಿಂಗ್ 20-3-62-0, ರೋಹಿತ್ ಶರ್ಮಾ 6-0-21-0, ರವೀಂದ್ರ ಜಡೇಜಾ 22-6-34-1, ಶಿಖರ್ ಧವನ್ 2-0-4-0.