ಕಂಚು ಗೆದ್ದ ಓಂಕಾರ್
ಗ್ಲಾಸ್ಗೋ: ಭಾರತದ ಓಂಕಾರ್ ಓಠಾರಿ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಟ್ಟಿದ್ದಾರೆ.
ಶನಿವಾರ ತಡರಾತ್ರಿ ನಡೆದ ಪುರುಷರ 69 ಕೆ.ಜಿ. ವಿಭಾಗದ ಪೈಪೋಟಿಯಲ್ಲಿ ಓಂಕಾರ್, ಒಟ್ಟು 296 ಕೆ.ಜಿ. ಭಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಭಾಜನರಾದರು. ಸ್ನ್ಯಾಚ್ನಲ್ಲಿ 136 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 160 ಕೆ.ಜಿ. ಭಾರ ಎತ್ತಿದ 26ರ ಭಾರತೀಯ ಲಿಫ್ಟರ್ ಮೂರನೇ ಸ್ಥಾನದ ಗೌರವ ಪಡೆದರು.
ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕೂಡ ಒಟ್ಟು 296 ಕೆ.ಜಿ. ಭಾರ ಎತ್ತಿದ್ದ ಓಂಕಾರ್ ಮೊದಲ ಸ್ಥಾನವನ್ನೇ ಗಳಿಸಿದ್ದರು.
ಮಲೇಷಿಯಾದ ಮೊಹ್ಮದ್ ಹಫೀಫಿ ಮನ್ಸೂರ್ (ಒಟ್ಟು 305 ಕೆ.ಜಿ.) ಮತ್ತು ನೈಜೀರಿಯಾದ ಯಿಂಕಾ ಅಯೇನುವಾ (ಒಟ್ಟು 301 ಕೆ.ಜಿ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಮಧ್ಯೆ ಭಾರತದ ಮಹಿಳಾ ಲಿಫ್ಟರ್ ಮೀನಾ ಕುಮಾರಿ 58 ಕೆ.ಜಿ. ವಿಭಾಗದಲ್ಲಿ ಕೇವಲ 194 ಕೆ.ಜಿ. ತೂಕ ಎತ್ತಲಷ್ಟೇ ಶಕ್ತರಾಗಿ ಐದನೇ ಸ್ಥಾನ ಪಡೆದು ನಿರಾಶೆ ಅನುಭವಿಸಿದರು.