ನ್ಯಾಯಾಂಗ ಪ್ರಕ್ರಿಯೆ ಗೌರವಿಸಲು ಧೋನಿ, ಕುಕ್‌ಗೆ ಐಸಿಸಿ ಒತ್ತಾಯ
ಸೌಥ್‌ಹ್ಯಾಮ್ಟನ್: ರವೀಂದ್ರ ಜಡೇಜಾ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ನಡೆದ ಮಾತಿನ ಚಕಮಕಿ ಪ್ರಕರಣದ ಕುರಿತು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್ ಅವರು ಟೀಕೆ ಮಾಡಿರುವ ಕುರಿತು ಐಸಿಸಿ ಗುರುವಾರ ಆಕ್ಷೇಪಣೆ ವ್ಯಕ್ತಪಡಿಸಿದೆ. ಅಲ್ಲದೆ, ನ್ಯಾಯಾಂಗ ಪ್ರಕ್ರಿಯೆಗೆ ಗೌರವ ನೀಡುವಂತೆ ಇಬ್ಬರೂ ನಾಯಕರನ್ನು ಐಸಿಸಿ ಒತ್ತಾಯಿಸಿದೆ.
ಜಡೇಜಾ ಅವರಿಗೆ ಐಸಿಸಿ ಮ್ಯಾಚ್ ರೆಫರೀ ಡೇವಿಡ್ ಬೂನ್ ಅವರು 1ನೇ ಸ್ತರದ ಅಪರಾಧ ಹೊರಿಸುವ ಮೂಲಕ ಪಂದ್ಯ ಶುಲ್ಕದ ಶೇ. 50ರಷ್ಟು ದಂಡ ವಿಧಿಸಿದ್ದನ್ನು ನಾಯಕ ಮಹೇಂದ್ರ ಸಿಂಗ್ ಧೋನಿ ಖಂಡಿಸಿದ್ದರು. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಪ್ರಕರಣದ ಕುರಿತು ಎರಡೂ ತಂಡಗಳ ನಾಯಕರು ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಐಸಿಸಿ ಶಿಸ್ತು ಸಮಿತಿ ಪ್ರಕ್ರಿಯೆ ಕುರಿತು ಟೀಕೆ ಮಾಡಲಾಗಿದೆ' ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ಸ್‌ನ್ ಅವರು ತಿಳಿಸಿದ್ದಾರೆ.'ರೆಫರಿ ಡೇವಿಡ್ ಬೂನ್ ನೀಡಿರುವ ತೀರ್ಪನ್ನು ಗೌರವಿಸುವುದಾಗಿ ಐಸಿಸಿ ಒತ್ತಿ ಹೇಳುತ್ತದೆ. ಇಂತಹ ಪ್ರಕರಣಗಳಲ್ಲಿ ಐಸಿಸಿ ನೀತಿ ಸಂಹಿತೆ ಕುರಿತು ವಿಚಾರಣೆ ನಡೆಸುವುದು ಕಠಿಣವಾದ ವಿಷಯ. ಸಂಪೂರ್ಣ ಕಾನೂನಾತ್ಮಕ ಕಡತಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸುವುದು ಸುಲಭದ ವಿಷಯವಲ್ಲ' ಎಂದು ರಿಚರ್ಡ್ಸ್‌ನ್ ತಿಳಿಸಿದ್ದಾರೆ.
'ಪ್ರಕರಣದ ಕುರಿತು ಎರಡೂ ಬದಿಯಿಂದ ಸಲ್ಲಿಸಿದ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬೂನ್ ಜಾಗರೂಕರಾಗಿ ತಗೆದುಕೊಂಡಿರುವ ತೀರ್ಮಾನ ನಮಗೆ ತೃಪ್ತಿ ತಂದಿದೆ' ಎಂದಿದ್ದಾರೆ ಅವರು.