ಬ್ಯಾಡ್ಮಿಂಟನ್ ಸೆಮೀಸ್ಗೆ ಭಾರತ
ಗ್ಲಾಸ್ಗೋ: ತವರಿನ ಅಗ್ರಮಾನ್ಯ ಆಟಗಾರ್ತಿ ಪಿ.ವಿ. ಸಿಂಧು ಸೋಲನುಭವಿಸಿದರೂ ಸಹ ಭಾರತ ತಂಡದ ಆಟಗಾರರು ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಮಿಶ್ರ ತಂಡ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಲು ಯಶಸ್ವಿಯಾಗಿದ್ದಾರೆ.
ಭಾನುವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತ ತಂಡ 3-1ರ ಅಂತರದಲ್ಲಿ ಕೆನಡಾ ತಂಡವನ್ನು ಪರಾಭವಗೊಳಿಸಿತು. ಮೊದಲಿಗೆ ಮಿಶ್ರ ಡಬಲ್ಸ್ನಲ್ಲಿ ಕಿಡಂಬಿ ಶ್ರೀಕಾಂತ್ ಮತ್ತು ಜ್ವಾಲಾ ಗುಟ್ಟಾ 21-19, 17-21, 21-18ರಿಂದ ಕೆನಡಾದ ಟಾಬಿ ನಗ್ ಮತ್ತು ಅಲೆಕ್ಸ್ ಬ್ರೂಸ್ರನ್ನು ಮಣಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ನಂತರ ಸಿಂಗಲ್ಸ್ ಪಂದ್ಯದಲ್ಲಿ ಸೆಣಸಿದ ಪರುಪಳ್ಳಿ ಕಶ್ಯಪ್, 21-11, 21-9 ಅಂಕಗಳಿಂದ ಆ್ಯಂಡ್ರ್ಯೂ ಡಿಸೋಜಾ ಅವರನ್ನು ಸೋಲಿಸಿ ಭಾರತದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು. ಆದರೆ, ಮೂರನೇ ಪಂದ್ಯದಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಸೆಣಸಿದ ಪಿ.ವಿ. ಸಿಂಧು 21-15, 20-22, 17-21ರಿಂದ ಮಿಚೆಲಿ ಲೀ ಎದುರು ಸೋಲನುಭವಿಸಿದಾಗ ಭಾರತ 2-1ಕ್ಕೆ ಇಳಿಯಿತು. ಆದರೆ, ನಂತರ ನಾಲ್ಕನೇ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಪ್ರಣವ್ ಚೋಪ್ರಾ ಮತ್ತು ಅಕ್ಷಯ್ ದಿವಾಲ್ಕರ್, 21-15, 19-21, 21-13ರಿಂದ ಆ್ಯಡ್ರಿಯನ್ ಲಿಯು ಮತ್ತು ಡೆರಿಕ್ ನಗ್ರನ್ನು ಮಣಿಸಿ ಭಾರತಕ್ಕೆ ನಾಲ್ಕರಘಟ್ಟ ಖಚಿತಪಡಿಸಿದರು.