ರಾಜ್ವಿಂದರ್ಗೆ ಕಂಚಿನ ಹಾರ
ಗ್ಲಾಸ್ಗೋ: ಭಾರತದ ರಾಜ್ವಿಂದರ್ ಕೌರ್ ಮಹಿಳೆಯರ ಜೂಡೋ ಸ್ಪರ್ಧೆಯಲ್ಲಿ ಕಂಚಿನ ಗರಿ ಮೂಡಿಸಿಕೊಂಡಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದ ಮೂರನೇ ದಿನದ ಸ್ಪರ್ಧೆಗಳಲ್ಲಿ ರಾಜ್ವಿಂದರ್ ಕೌರ್, ಮಹಿಳೆಯರ 78 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗಿಟ್ಟಿಸಿದರು. ಈ ಹೋರಾಟದಲ್ಲಿ ಭಾರತೀಯ ಆಟಗಾರ್ತಿ, ಕೀನ್ಯಾದ ಅಕಿನೈ ರಾಟುಗಿ ಅವರನ್ನು ಮಣಿಸಿ ಮೂರನೇ ಸ್ಥಾನ ಸಂಪಾದಿಸಿದರು. ಕೀನ್ಯಾ ಆಟಗಾರ್ತಿ ಪೆನಾಲ್ಟಿ ರೂಪದಲ್ಲಿ ಮೂರು ಅಂಕಗಳನ್ನು ನೀಡಿದ್ದು ರಾಜ್ವಿಂದರ್ಗೆ ನೆರವಾಯಿತು. ಉಳಿದಂತೆ, ಕಂಚಿನ ಪದಕಗಳಿಗಾಗಿ ನಡೆದ ಇನ್ನಿತರ ಪಂದ್ಯಗಳಲ್ಲಿ ಪುರುಷರ ವಿಭಾಗದಲ್ಲಿ ಸಾಹಿಲ್ ಪಥಾನಿಯಾ (100ಕೆ.ಜಿ. ವರೆಗಿನ ವಿಭಾಗ) ಹಾಗೂ ಮಹಿಳೆಯರ ವಿಭಾಗದಲ್ಲಿ ಜಿನಾ ಜೇವಿ ಚೊಂಗ್ಥಾಮ್ (78ಕೆ.ಜಿ. ವರೆಗಿನ ವಿಭಾಗ) ಸೋಲನುಭವಿಸಿ ಪದಕದಿಂದ ವಂಚಿತರಾದರು.