ಮಹಿ ಪಾಲಿಗೆ ಸೋಥಾಂಪ್ಟನ್
ಬ್ಯಾಟಿಂಗ್ ಶೂರರು ಎನಿಸಿಕೊಂಡಿರುವ ಭಾರತೀಯ ಆಟಗಾರರು ಬ್ಯಾಟಿಂಗ್ ಪಿಚ್ನಲ್ಲೇ ಕೈಚೆಲ್ಲುವ ///
ಸೌಥಾಂಪ್ಟನ್: ಬ್ಯಾಟಿಂಗ್ ಶೂರರು ಎನಿಸಿಕೊಂಡಿರುವ ಭಾರತೀಯ ಆಟಗಾರರು ಬ್ಯಾಟಿಂಗ್ ಪಿಚ್ನಲ್ಲೇ ಕೈಚೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 266 ರನ್ಗಳಿಂದ ಮುಖಭಂಗ ಅನುಭವಿಸಿದ್ದಾರೆ. ಇದರೊಂದಿಗೆ 5 ಪಂದ್ಯಗಳ ಸರಣಿ 1-1 ರಿಂದ ಸಮಬಲ ಕಂಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಮಹೇಂದ್ರ ಸಿಂಗ್ ನಾಯಕತ್ವದ ಟೀಂ ಇಂಡಿಯಾ, ನಂತರ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಇಲ್ಲದ ಪ್ರಸಂಶೆಗೆ ಒಳಗಾಗಿತ್ತು. ಆದರೆ, ಈಗ 3ನೇ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿರುವುದು ತಂಡ ಸ್ಥಿರ ಪ್ರದರ್ಶನ ನೀಡದಿರುವುದಕ್ಕೆ ಕನ್ನಡಿಯಾಗಿದೆ. ಐದನೇ ಮತ್ತು ಅಂತಿಮ ದಿನವಾದ ಗುರುವಾರ 6 ವಿಕೆಟ್ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ, ಪಂದ್ಯವನ್ನು ಉಳಿಸಿಕೊಳ್ಳಲು ದಿನವಿಡೀ ಹೋರಾಟ ನಡೆಸಬೇಕಾಗಿತ್ತು. ಆದರೆ, ಮೊದಲ ಅವಧಿಯಲ್ಲೇ ಆಲೌಟ್ ಆದ ಭಾರತಕ್ಕೆ, ದ್ವಿತೀಯ ಇನಿಂಗ್ಸ್ನಲ್ಲಿ 66.4 ಓವರ್ಗಳಲ್ಲಿ ಕೇವಲ 178 ರನ್ ಗಳಿಸಿಲಷ್ಟೇ ಸಾಧ್ಯವಾಯಿತು.
ಆಂಗ್ಲರ ನಾಡಿನಲ್ಲಿ ಭಾರತಕ್ಕೆ ಇದು ದೊಡ್ಡ ಸೋಲಾಗಿದೆ. ಆದರೆ, ಸಾರ್ವಕಾಲಿಕ ಹೀನಾಯ ಸೋಲಲ್ಲ. ಕಾರಣ, 2011ರ ಪ್ರವಾಸದಲ್ಲಿ ನಾಟಿಂಗ್ಹ್ಯಾಮ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 319 ರನ್ಗಳಿಂದ ಸೋಲನುಭವಿಸಿತ್ತು. ಆ್ಯಶಸ್ ಸರಣಿಯಿಂದಲೇ ಕಳೆದ ಹತ್ತು ಪಂದ್ಯಗಳಿಂದ ಜಯಕ್ಕಾಗಿ ಹಪಹಪಿಸುತ್ತಿದ್ದ ಇಂಗ್ಲೆಂಡ್ಗೆ ಕೊನೆಗೂ ಜಯದ ಸಂಭ್ರಮ ಸಿಕ್ಕಿದೆ.
ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಅರೆಕಾಲಿಕ ಸ್ಪಿನ್ ಬೌಲರ್ ಮೋಯಿನ್ ಅಲಿ ಅವರು, ಭಾರತದ ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಲಗುಬಗನೆ ಪೆವಿಲಿಯನ್ಗೆ ಅಟ್ಟಿದರು. 20.4 ಓವರ್ಗಳಲ್ಲಿ 67 ರನ್ ನೀಡಿದ ಅಲಿ 6 ವಿಕೆಟ್ ಕಬಳಿಸಿದರು. ಗುರುವಾರ 43ನೇ ಓವರ್ನಲ್ಲಿ ರೋಹಿತ್ ಶರ್ಮಾ (6) ವಿಕೆಟ್ ಪಡೆದ ಜೇಮ್ಸ್ ಆ್ಯಂಡರ್ಸನ್, ಗುರುವಾರ ಭಾರತಕ್ಕೆ ಮೊದಲ ಆಘಾತ ನೀಡಿದರು. ಆ್ಯಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿದ ರೋಹಿತ್ ಪೆವಿಲಿಯನ್ ಸೇರಿದರು. ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ (6) ಸಹ ಕೀಪರ್ಗೆ ಕ್ಯಾಚ್ ನೀಡಿದರು.
ಭಾರತದ ಪರ ದ್ವಿತೀಯ ಇನಿಂಗ್ಸ್ನಲ್ಲಿ ಶ್ರೇಷ್ಠ ಬ್ಯಾಟಿಂಗ್ ನಡೆಸಿದ್ದು ಅಜಿಂಕ್ಯ ರಹಾನೆ (ಅಜೇಯ 52) ಮಾತ್ರ. 5ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ರಹಾನೆ, 121 ಎಸೆತಗಳನ್ನು ಎದುರಿಸಿ ಅರ್ಧ ಶತಕ ದಾಖಲಿಸುವ ಮೂಲಕ ಅಜೇಯರಾಗಿ ಉಳಿದರು.
ಪಂದ್ಯದಲ್ಲಿ ಒಟ್ಟು 7 ವಿಕೆಟ್ಪಡೆದ ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬೌಲಿಂಗ್ ವಿಭಾಗದಲ್ಲಿ ಗಾಯಾಳು ಇಶಾಂತ್ ಶರ್ಮಾ ಸ್ಥಾನ ತುಂಬಿದ್ದ ಭಾರತದ ಪಂಕಜ್ ಸಿಂಗ್ ಪದಾರ್ಪಣೆ ಪಂದ್ಯದಲ್ಲೇ ವಿಕೆಟ್ ಪಡೆಯದೇ 100ಕ್ಕೂ ಅಧಿಕ ರನ್ ನೀಡಿದರು.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್ 569ಕ್ಕೆ7 (ಡಿಕ್ಲೇರ್)
ಭಾರತ ಮೊದಲನೇ ಇನಿಂಗ್ಸ್ 330ಕ್ಕೆ
ಇಂಗ್ಲೆಂಡ್ 2ನೇ ಇನಿಂಗ್ಸ್ 4 ವಿಕೆಟ್ಗೆ 205 (ಡಿಕ್ಲೇರ್)
ಭಾರತ 2ನೇ ಇನಿಂಗ್ಸ್ 178 (ಬುಧವಾರದಿಂದ ಮುಂದುವರಿದಿದೆ)
ರಹಾನೆ ಅಜೇಯ 52, ರೋಹಿತ್ ಸಿ ಬಟ್ಲರ್ ಬಿ ಆ್ಯಂಡರ್ಸನ್ 6, ಧೋನಿ ಸಿ ಬಟ್ಲರ್ ಬಿ ಆ್ಯಂಡರ್ಸನ್ 6, ಜಡೇಜಾ ಬಿ ಅಲಿ 15, ಭುವನೇಶ್ವರ ಸಿ ಆ್ಯಂಡರ್ಸನ್ ಬಿ ಅಲಿ 0, ಮೊಹ್ಮದ್ ಶಮಿ 0, ಪಂಕಜ್ ಸಿಂಗ್ ಬಿ ಅಲಿ 9, ಇತರೆ: (ಬೈ-4, ಲೆಗ್ಬೈ-6, ವೈಡ್-1) 11.ವಿಕೆಟ್ ಪತನ: 1-26, 2-29, 3-80, 4-89, 5-112, 6-120, 7-152, 8-152, 9-154, 10-178.
ಬೌಲಿಂಗ್ ವಿವರ: ಆ್ಯಂಡರ್ಸನ್ 14-5-24-2, ಬ್ರಾಡ್ 13-6-22-0, ವೋಕ್ಸ್ 11-3-23-0, ಅಲಿ 20.4-4-67-6, ಜೋರ್ಡಾನ್ 5-0-22-0, ರೂಟ್ 2-0-5-1, ಬ್ಯಾಲೆನ್ಸ್ 1-0-5-0.