ಸ್ವರ್ಣ ಬೇಟೆಗೆ ಮೂವರು ಕುಸ್ತಿಶೂರರು
ಭಾರತದ ಮೂವರು ಕುಸ್ತಿ ಪಟುಗಳಾದ ಯೋಗೇಶ್ವರ ದತ್, ಗೀತಿಕಾ ಝಾಕರ್ ಮತ್ತು ಬಬಿತಾ ಕುಮಾರಿ...
ಗ್ಲಾಸ್ಗೋ: ಭಾರತದ ಮೂವರು ಕುಸ್ತಿ ಪಟುಗಳಾದ ಯೋಗೇಶ್ವರ ದತ್, ಗೀತಿಕಾ ಝಾಕರ್ ಮತ್ತು ಬಬಿತಾ ಕುಮಾರಿ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ತಮ್ಮ ಪ್ರತ್ಯೇಕ ತೂಕದ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಬೆಳ್ಳಿ-ಚಿನ್ನದ ಪದಕ ಗೆದ್ದುಕೊಡುವುದನ್ನು ಖಚಿತಪಡಿಸಿದ್ದಾರೆ. ಗುರುವಾರ ನಡೆದ ಪುರುಷರ 65 ಕೆ.ಜಿ. ಫ್ರೀಸ್ಟೈಲ್ ಸೆಮಿಫೈನಲ್ನಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ, 10-0 ಅಂಕಗಳಿಂದ ಶ್ರೀಲಂಕಾದ ಎದುರಾಳಿ ಚಾಮರ ಪೆರೇರಾ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಫೈನಲ್ಗೆ ಹೆಜ್ಜೆ ಹಾಕಿದರು.
ಇನ್ನು ಮಹಿಳೆಯರ ವಿಭಾಗದಲ್ಲಿ 63 ಕೆ.ಜಿ. ವಿಭಾಗದಲ್ಲಿ ಸೆಣಸಿದ ಗೀತಿಕಾ ಝಾಕರ್, 4-1 ಮುನ್ನಡೆಯೊಂದಿಗೆ ವೇಲ್ಸ್ನ ಸರಾ ಕೊನೋಲಿ ವಿರುದ್ಧ ಗೆಲವು ದಾಖಲಿಸಿ ಅಂತಿಮ ಸುತ್ತು ತಲುಪಿದರು. ಅದೇ ರೀತಿ, ಮಹಿಳೆಯರ 55 ಕೆ.ಜಿ. ಪೈಪೋಟಿಯಲ್ಲಿ ಬಬಿತಾ ಕುಮಾರಿ ಅವರು ಇಂಗ್ಲೆಂಡ್ನ ಲೋಯಿಸಾ ಪೊರೊಗೊವಸ್ಕಾ ಎದುರು ಜಯಭೇರಿ ಬಾರಿಸಿದರು. ಈ ಮಧ್ಯೆ ಪವನ್ ಕುಮಾರ್ ಪುರುಷರ 86 ಕೆ.ಜಿ. ಕುಸ್ತಿ ಸೆಣಸಿನಲ್ಲಿ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.