ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್ಗೆ ಶರಪೋವಾ

ರಷ್ಯಾದ ಮಾರಿಯಾ ಶರಪೋವಾ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ..

Rashmi Kasaragodu
Updated On : 6 Jun 2014, 1:15 am

ಪ್ಯಾರಿಸ್: ರಷ್ಯಾದ ಮಾರಿಯಾ ಶರಪೋವಾ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತೆ ಮಾರಿಯಾ ಶರಪೋವಾ, 4-6, 7-5, 6-2 ಸೆಟ್ಗಳಿಂದ ಕೆನಡಾದ 18ನೇ ಶ್ರೇಯಾಂಕಿತೆ ಯುಗೇನಿ ಬೌಚರ್ಡ್ ಬೌಚರ್ಡ್ ಅವರನ್ನು ಸೋಲಿಸಿದರು.
ಎರಡು ಗಂಟೆ 27 ನಿಮಿಷಗಳ ಪೈಪೋಟಿಯಲ್ಲಿ ರಷ್ಯನ್ ಆಟಗಾರ್ತಿ ಮೊದಲ ಸೆಟ್ ಸೋತು ಹಿನ್ನಡೆ ಅನುಭವಿಸಿದ್ದರು. ಆದರೆ, ನಂತರದ ಎರಡೂ ಸೆಟ್ಗಳ ಹೋರಾಟದಲ್ಲಿ ತಮ್ಮ ಅನುಭವವನ್ನು ಪೂರ್ಣ ಪಣಕ್ಕಿಟ್ಟು ಹೋರಾಟ ನಡೆಸುವುದರೊಂದಿಗೆ ಅಂತಿಮ ಗೆಲವು ತಮ್ಮದಾಗಿಸಿಕೊಂಡರು.
ಈ ಗೆಲವಿನೊಂದಿಗೆ ಶರಪೋವಾ ಜೀವನದ ಐದನೇ ಹಾಗೂ ಎರಡನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಳ್ಳುವತ್ತ ಅಂತಿಮ ಮೆಟ್ಟಿಲು ತಲುಪಿದರು. ಈ ಮುನ್ನ 2012ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ರಷ್ಯನ್ ಆಟಗಾರ್ತಿ, ಕಳೆದ ವರ್ಷ ಫೈನಲ್ನಲ್ಲಿ ಸೋಲನುಭವಿಸುವ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಹೊಂದಿದ್ದರು. ಆದರೆ, ಈ ಬಾರಿ ಮತ್ತೆ ಮುಕುಟ ಧರಿಸುವ ಉತ್ತಮ ಅವಕಾಶ ಶರಪೋವಾ ಪಾಲಿಗೆ ಒದಗಿಬಂದಿದೆ.
ಮತ್ತೊಂದೆಡೆ ತಮ್ಮ ಎರಡನೇ ಗ್ರ್ಯಾನ್ಸ್ಲಾಮ್ ಋುತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುಗೆನಿ ಬೌಚರ್ಡ್ ಮೊದಲ ಬಾರಿಗೆ ಫ್ರೆಂಚ್ ಓಪನ್ನಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದರು. ಇದೇ ಸಾಲಿನ ಆರಂಭದ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ನಲ್ಲಿ ನಿರ್ಗಮಿಸಿದ್ದ ಯುಗೆನಿ, ಇಲ್ಲಿಯೂ ಸಹ ಅದೇ ಕಹಿ ಅನುಭವಿಸುವುದರೊಂದಿಗೆ ಚೊಚ್ಚಲ ಗ್ರ್ಯಾನ್ಸ್ಲಾಮ್ ಗೆದ್ದುಕೊಳ್ಳುವ ಆಸೆಯಿಂದ ವಂಚಿತರಾದರು.
ಕೆನಡಾದ ಆಟಗಾರ್ತಿಯು ಮೊದಲ ಸೆಟ್ ಗೆದ್ದು ಶುಭಾರಂಭ ಮಾಡಿದ್ದರೂ ಸಹ ನಂತರದ ಹೋರಾಟಗಳಲ್ಲಿ ಶರಪೋವಾರ ಅನುಭವದಾಟದ ಮುಂದೆ ತಲೆಬಾಗಿಸಲೇಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement