ಬ್ಯಾಕ್ ಕಿಕ್- 1974
ಪಶ್ಚಿಮ ಜರ್ಮನಿ ಪರಾಕ್ರಮ
1954ರಲ್ಲಿ ಚಾಂಪಿಯನ್ ಆಗಿದ್ದ ಪಶ್ಚಿಮ ಜರ್ಮನಿ ತಂಡ ನಂತರ 20 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು. ತವರಿನಲ್ಲೆ ಪ್ರಶಸ್ತಿಗಾಗಿ ಕಾದಾಟ ನಡೆಸಿದ ಜರ್ಮನಿ ತಂಡ ಪ್ರಶಸ್ತಿ ಸುತ್ತಿನಲ್ಲಿ ನೆದರ್ಲೆಂಡ್ ತಂಡವನ್ನು 2-1 ಅಂತರದಲ್ಲಿ ಮಣಿಸಿತು.
ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಒಟ್ಟು 99 ತಂಡಗಳು ಭಾಗವಹಿಸಿದ್ದು, ಅದುವರೆಗಿನ ಅತಿ ಹೆಚ್ಚು ಸಂಖ್ಯೆಯಾಗಿತ್ತು. ಆದರೆ ಟೂರ್ನಿಯಲ್ಲಿ ಪ್ರಮುಖ ಐದು ತಂಡಗಳಾದ ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್, ಹಂಗರಿ ಹಾಗೂ ಸೋವಿತ್ ಯೂನಿಯನ್ ತಂಡಗಳ ಗೈರು ಎದ್ದು ಕಾಣುತಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಪ್ರಮುಖ ಸುತ್ತಿನಲ್ಲಿ ಎರಡು ಗುಂಪುಗಳಾಗಿ ಕಾದಾಟ ನಡೆಸಿದವು. ಈ ಎರಡು ಗುಂಪಿನ ಅಗ್ರ ತಂಡಗಳು ಫೈನಲ್ನಲ್ಲಿ ಸೆಣೆಸಿದವು. ಟೂರ್ನಿಯಲ್ಲಿ ಒಟ್ಟು 38 ಪಂದ್ಯಗಳು ನಡೆದಿದ್ದು, ಪೊಲೆಂಡ್ 16 ಗೋಲು ದಾಖಲಿಸಿತು. ಈ ಪಂದ್ಯಾವಳಿಯಲ್ಲಿ ಹೊಸ ಟ್ರೋಫಿಯನ್ನು ಬಳಸಲು ಫಿಫಾ ನಿರ್ಧರಿಸಿತು. ಹಾಗಾಗಿ 1970ರಲ್ಲಿ ಗೆದ್ದ ಟ್ರೋಫಿಯನ್ನು ಬ್ರೆಜಿಲ್ ತನ್ನಲ್ಲೇ ಉಳಿಸಿಕೊಳ್ಳಲು ಫಿಫಾ ಅನುಮತಿ ನೀಡಿತು.
1978 ಅಬ್ಬರಿಸಿದ ಅರ್ಜೆಂಟೀನಾ
ವಿಶ್ವ ಫುಟ್ಬಾಲ್ನಲ್ಲಿ ಪ್ರಬಲ ತಂಡವಾಗಿ ಗುರುತಿಸಿಕೊಂಡಿದ್ದರೂ ಅರ್ಜೆಂಟೀನಾ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿದ್ದು, 1978ರಲ್ಲಿ. ತವರಿನಲ್ಲೇ ನಡೆದ ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅರ್ಜೆಂಟೀನಾ ಫೈನಲ್ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿ ಚಾಂಪಿಯನ್ ಪಟ್ಟಕ್ಕೇರಿತು.
ಅರ್ಜೆಂಟೀನಾ ಈ ಟೂರ್ನಿ ಆಯೋಜಿಸುವ ಎರಡು ವರ್ಷಕ್ಕೂ ಮುನ್ನ ಮಿಲಿಟರಿ ಆಡಳಿತಕ್ಕೆ ಸಿಲುಕಿತು. ಅಲ್ಲದೆ ಈ ಪಂದ್ಯಾವಳಿಯನ್ನು ಮಿಲಿಟರಿ ಆಡಳಿತದಲ್ಲೇ ಆಯೋಜಿಸಲಾಯಿತು. ಅರ್ಜೇಂಟೀನಾ ಫೈನಲ್ಗೆ ಪ್ರವೇಶಿಸಲು ಪೆರು ವಿರುದ್ಧದ ಪಂದ್ಯದಲ್ಲಿ 4 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಬೇಕಿತ್ತು. ಅರ್ಜೆಂಟೀನಾ ತಂಡ 6-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ನಂತರ ಅರ್ಜೆಂಟೀನಾದ ಮಿಲಿಟರಿ ಆಡಳಿತ ಈ ಪಂದ್ಯದ ಫಲಿತಾಂಶದ ಹಿಂದೆ ಪ್ರಭಾವ ಬೀರಿತ್ತು ಎಂಬ ಆರೋಪ ಕೇಳಿ ಬಂದಿತು. 16 ತಂಡಗಳು ಭಾಗವಹಿಸಿದ್ದು, 38 ಪಂದ್ಯಗಳು ನಡೆದಿದ್ದು ಒಟ್ಟು 102 ಗೋಲು ದಾಖಲಾಗಿದ್ದವು.
1982
ಇಟಲಿ ಮಡಿಲಿಗೆ ಪ್ರಶಸ್ತಿ
ಸ್ಪೇನ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಪ್ರಭುತ್ವ ಸಾಧಿಸಿದ್ದು, ಇಟಲಿ. ಪಶ್ಚಿಮ ಜರ್ಮನಿ ವಿರುದ್ಧ ಫೈನಲ್ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದ ಇಟಲಿ ಪ್ರಶಸ್ತಿಗೆ ಮುತ್ತಿಕ್ಕಿತು. ಈ ಮೂಲಕ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿತು.
ಇಟಲಿ ತಂಡ ಮೊದಲ ಸುತ್ತಿನಲ್ಲಿ ಒಂದೇ ಒಂದು ಗೆಲವು ಕಾಣದೇ ಮುಂದಿನ ಹಂತಕ್ಕೆ ಪ್ರವೇಶಿಸಿದ ಏಕೈಕ ತಂಡವಾಯಿತು. ಆಡಿದ ಮೂರೂ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಇಟಲಿ ಮುಂದಿನ ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಅಚ್ಚರಿ ಮೂಡಿಸಿತು. ಇಟಲಿ ತಂಡದ ಸಾರಥ್ಯವನ್ನು ವಹಿಸಿದ್ದ ಗೋಲ್ಕೀಪರ್ ಡಿನೊ ಜೊಫ್ ತಮ್ಮ 40ನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದಿದ್ದು, ವಿಶ್ವಕಪ್ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು. ಅಲ್ಲದೆ ಮೊದಲ ಬಾರಿಗೆ ಈ ವಿಶ್ವಕಪ್ನಲ್ಲಿ ಆರು ಖಂಡಗಳ ಕಾನ್ಫೆಡರೇಷನ್ ತಂಡಗಳು ಪ್ರಮುಖ ಸುತ್ತಿನಲ್ಲಿ ಭಾಗವಹಿಸಿದ್ದು, ನಂತರ ಈ ರೀತಿಯಾಗಿದ್ದು, 2006ರ ವಿಶ್ವಕಪ್ನಲ್ಲಿ. ಈ ವಿಶ್ವಕಪ್ನಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದು, 52 ಪಂದ್ಯಗಳಿಂದ 146 ಗೋಲುಗಳು ದಾಖಲಾಗಿದ್ದವು.