ಸೆಮೀಸ್ ಭರವಸೆ ಉಳಿಸಿಕೊಂಡ ಆಂಗ್ಲರು
ದಿ ಹೇಗ್ (ಹಾಲೆಂಡ್): ವಿಶೇಷ ಕಾರ್ಯತಂತ್ರ ಉಪಯೋಗಿಸಿಕೊಂಡುಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ಪುರುಷರ ತಂಡ, ವಿಶ್ವಕಪ್ ಹಾಕಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮಲೇಷ್ಯಾ ನೀಡಿದ ಕಠಿಣ ಸವಾಲನ್ನು ಮೆಟ್ಟಿ ಜಯ ಕಂಡಿತು.
ಮಲೇಷ್ಯಾ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದ ಆಂಗ್ಲರು ಸೆಮಿಫೈನಲ್ ಪ್ರವೇಶಿಸುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
ಪಂದ್ಯದ 4ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿದ ಮಾರ್ಕ್ ಗ್ಲೆಗ್ಹಾರ್ನೆ ಆಂಗ್ಲರಿಗೆ ಮುನ್ನಡೆ ತಂದುಕೊಟ್ಟರು.ಮೆಲೇಷ್ಯಾ ಸಹ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಸೇರಿದಂತೆ ಹಲವು ಬಾರಿ ಗೋಲು ದಾಖಲಿಸುವ ಅವಕಾಶ ಪಡೆದುಕೊಂಡಿತ್ತು. ಆದರೆ, ಆ ಎಲ್ಲ ಅವಕಾಶಗಳಲ್ಲೂ ಅದು ಕೈಚೆಲ್ಲಿತು.
ಪಂದ್ಯ ಇನ್ನೇನು ಅಂತ್ಯಗೊಳ್ಳಲು ಕೇವಲ ಮೂರು ನಿಮಿಷ ಬಾಕಿ ಇರುವಾಗ ಮತ್ತೊಂದು ಗೋಲು ದಾಖಲಿಸಿದ ಆ್ಯಶ್ಲೆ ಜಾಕ್ಸನ್ ಅವರು ಇಂಗ್ಲೆಂಡ್ ಹೆಚ್ಚಿನ ಅಂತರದ ಜಯ ಸಿಗಲು ಕಾರಣರಾದರು.