ಫೈನಲ್ಗೆ ನಡಾಲ್, ನೊವಾಕ್
ಸ್ಪೇನಿನ ರಾಫೆಲ್ ನಡಾಲ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್...
ಪ್ಯಾರಿಸ್: ಸ್ಪೇನಿನ ರಾಫೆಲ್ ನಡಾಲ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ಆಟಗಾರರು ಚಾಂಪಿಯನ್ ಪಟ್ಟಕ್ಕಾಗಿ ಪರಸ್ಪರ ಕಾದಾಟ ನಡೆಸಲಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಂಬರ್ ಒನ್ ಆಟಗಾರ ನಡಾಲ್, 6-3, 6-2, 6-1 ನೇರ ಸೆಟ್ಗಳಿಂದ ಏಳನೇ ಶ್ರೇಯಾಂಕಿತ ಬ್ರಿಟನ್ನಿನ ಆ್ಯಂಡಿ ಮರ್ರೆ ಅವರನ್ನು ಮಣಿಸಿದರು. ಒಂದು ಗಂಟೆ 40 ನಿಮಿಷಗಳ ಆಟದಲ್ಲಿಯೇ ನಡಾಲ್ ವಿಜಯೋತ್ಸವ ಆಚರಿಸಿದರು.
ಈ ಗೆಲವಿನೊಂದಿಗೆ ಸ್ಪೇನ್ ಆಟಗಾರ ಒಟ್ಟಾರೆ ದಾಖಲೆಯ 14ನೇ ಗ್ರ್ಯಾನ್ಸ್ಲಾಮ್ ಹಾಗೂ ಸತತ 5ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವತ್ತ ಅಂತಿಮ ಹೆಜ್ಜೆಯನ್ನಿಟ್ಟಿದ್ದಾರೆ.
ಮತ್ತೊಂದೆಡೆ ಮರ್ರೆ ಮೊದಲ ಬಾರಿಗೆ ಫ್ರೆಂಚ್ ಓಪನ್ನಲ್ಲಿ ಫೈನಲ್ ತಲುಪಲು ಮಗದೊಮ್ಮೆ ವಿಫಲರಾಗಿದ್ದಾರೆ. ಈ ಮುನ್ನ ಅವರು 2011ರಲ್ಲಿ ಕೂಡ ಸೆಮಿಫೈನಲ್ನಲ್ಲಿಯೇ ನಿರ್ಗಮಿಸಿದ್ದರು.
ಗುಲ್ಬೀಸ್ ಮಣಿಸಿದ ಜೊಕೊವಿಚ್: ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಚ್ 6-3, 6-3, 3-6, 6-3 ಸೆಟ್ಗಳಿಂದ ಲ್ಯಾಟ್ವಿಯಾದ ಎನೆಸ್ಟ್ಸ್ ಗುಲ್ಬೀಸ್ ಅವರನ್ನು ಪರಾಭವಗೊಳಿಸಿದರು.
ಈ ಗೆಲವಿನೊಂದಿಗೆ ಸರ್ಬಿಯಾ ಆಟಗಾರ ಮೊದಲ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಹಾಗೂ ಒಟ್ಟಾರೆ 7ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಕೊನೆಯ ಮೆಟ್ಟಿಲಿಗೆ ಬಂದು ನಿಂತರು.
2012ರಲ್ಲಿ ಫೈನಲ್ ತಲುಪಿದ್ದರಾದರೂ ಅಲ್ಲಿ ಸೋಲುಂಡು ಅಂತಿಮವಾಗಿ ರನ್ನರ್ ಅಪ್ ಪ್ರಶಸ್ತಿಗೆ ನಿಟ್ಟುಸಿರು ಬಿಟ್ಟಿದ್ದೇ ಸರ್ಬಿಯಾ ಆಟಗಾರನ ಫ್ರೆಂಚ್ ಓಪನ್ನಲ್ಲಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ಈ ಬಾರಿ ಮತ್ತೊಮ್ಮೆ ಅವರು ಫೈನಲ್ ತಲುಪುವ ಮೂಲಕ ಚೊಚ್ಚಲ ಫ್ರೆಂಚ್ ಓಪನ್ ಗರಿ ಮೂಡಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದ್ದಾರೆ.
ಈಗಾಗಲೆ ಜೊಕೊವಿಚ್ 4 ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಮತ್ತು ಯು.ಎಸ್. ಓಪನ್ಗಳಲ್ಲಿ ತಲಾ 1 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಎರಡು ಗಂಟೆ 34 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹೋರಾಟದಲ್ಲಿ ನೊವಾಕ್ ಜೊಕೊವಿಚ್ ಅದ್ಭುತ ಪ್ರದರ್ಶನ ನೀಡಿ ಎದುರಾಳಿ ವಿರುದ್ಧ ನಿರೀಕ್ಷಿತ ಗೆಲವು ತಮ್ಮದಾಗಿಸಿಕೊಂಡರು.
ಮತ್ತೊಂದೆಡೆ ತಮ್ಮ ಗ್ರ್ಯಾನ್ಸ್ಲಾಮ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದ ಲ್ಯಾಟ್ವಿಯಾದ ಗುಲ್ಬೀಸ್ ಅಂತಿಮ ಸುತ್ತು ಪ್ರವೇಶಿಸಲು ಮಾತ್ರ ವಿಫಲರಾದರು. ಈ ಮುನ್ನ ಅವರು 2008ರ ಫ್ರೆಂಚ್ ಓಪನ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿ ಉತ್ತಮ ಸಾಧನೆ ಮಾಡಿದ್ದರು.