ಬ್ರೆಜಿಲ್ನಲ್ಲಿ ಪ್ರತಿಭಟನಾಕಾರರು, ಪೊಲೀಸರ ನಡುವೆ ಘರ್ಷಣೆ
ಸಾವೋ ಪೊಲೊ: ಫುಟ್ಬಾಲ್ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ಪ್ರಮುಖ ನಗರಗಳಲ್ಲಿ ಒಂದಾದ ಸಾವೊ ಪೊಲೋದಲ್ಲಿ ಸಬ್ವೇ ನಿರ್ಮಿಸುವುದನ್ನು ನಿಲ್ಲಿಸಿ, ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ.
ಪ್ರತಿಷ್ಠಿತ ಪಂದ್ಯಾವಳಿಯ ಮೊದಲ ಪಂದ್ಯ ಇಲ್ಲಿಯೇ ನಡೆಯಬೇಕಾಗಿರುವ ಹಿನ್ನೆಲೆಯಲ್ಲಿ, ವಿಶ್ವಕಪ್ ಸಂಘಟಕರಲ್ಲಿ ಈ ಘರ್ಷಣೆ ತೀವ್ರ ಕಳವಳ ಉಂಟುಮಾಡಿದೆ. ಸುಮಾರು 3,000 ಜನರು ಸರ್ಕಾರದ ಯೋಜನೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ನಗರದಲ್ಲಿ ತೀವ್ರ ಸಂಚಾರ ವ್ಯತ್ಯಯಕ್ಕೆ ಕಾರಣವಾಗಿದೆ.
ಹೀಗಾಗಿ ಪೊಲೀಸರು, ಪ್ರತಿಭಟನಾಕಾರರನ್ನು ಚದುರಿಸಲು ಅಶ್ರು ವಾಯುನಂತಹ ಪ್ರಯೋಗಗಳನ್ನು ಮಾಡಿದ್ದಾರೆ. 'ನಮ್ಮ ಸಮಸ್ಯೆ ಇರುವುದು ರಾಷ್ಟ್ರೀಯ ತಂಡದೊಂದಿಗಲ್ಲ. ನಾವು ನಮ್ಮ ತಂಡವನ್ನು ಬೆಂಬಲಿಸಲಿದ್ದೇವೆ. ಆದರೆ, ಅಕ್ಟೋಬರ್ 5ರಂದು ಬ್ರೆಜಿಲ್ ಅಧ್ಯಕ್ಷರಾದ ಡಿಲ್ಮಾ ರೌಸೆಫ್ ಅವರನ್ನು ನಾವು ನರಕಕ್ಕೆ ಕಳುಹಿಸಲಿದ್ದೇವೆ' ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ.