ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶರಪೋವಾ ಫ್ರೆಂಚ್ ಕ್ವೀನ್

ರಷ್ಯಾದ ಸುಂದರಿ ಮಾರಿಯಾ ಶರಪೋವಾ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿ...

Rashmi Kasaragodu
Updated On : 8 Jun 2014, 12:30 pm

ಪ್ಯಾರಿಸ್: ರಷ್ಯಾದ ಸುಂದರಿ ಮಾರಿಯಾ ಶರಪೋವಾ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತೆ ಮಾರಿಯಾ ಶರಪೋವಾ 6-4, 6-7 (5-7), 6-4 ಸೆಟ್‌ಗಳಿಂದ ರೊಮೇನಿಯಾದ ಸಿಮೋನಾ ಹಾಲೆಪ್ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿಯ ಮೇಲೆ ತಮ್ಮ ಮೊಹರು ಒತ್ತಿದರು.
ಮೂರು ಗಂಟೆ 2 ನಿಮಿಷಗಳ ರೋಚಕ ಹೋರಾಟದಲ್ಲಿ ಶರಪೋವಾ ಮುಂದೆ ಸಿಮೋನಾ ಪ್ರಬಲ ಆಟವನ್ನೇ ಪ್ರದರ್ಶಿಸಿದರು. ಆದರೆ ಅಂತಿಮವಾಗಿ ರಷ್ಯನ್ ಆಟಗಾರ್ತಿ ಎದುರು ಸೋಲು ಕಾಣದೇ ವಿಧಿ ಇರಲಿಲ್ಲ.
ಮಾರಿಯಾ ಶರಪೋವಾ ನಿರೀಕ್ಷೆಯಂತೆ ಭರ್ಜರಿ ಆರಂಭವನ್ನೇ ಪಡೆದರು. ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಕಠಿಣ ಸವಾಲುಗಳು ಎದುರಾದರೂ ಸಹ ತಮ್ಮ ಅನುಭವ ಧಾರೆಯರೆಯುವ ಮೂಲಕ ಯಾವುದೇ ರೀತಿಯ ಆಘಾತಕ್ಕೆ ಒಳಗಾಗದೇ 57 ನಿಮಿಷಗಳಲ್ಲಿ ಗೆದ್ದು ಶುಭಾರಂಭ ಮಾಡಿದರು.
ಮೊದಲ ಸೆಟ್‌ನಲ್ಲಿ 7 ಬ್ರೇಕ್ ಪಾಯಿಂಟ್‌ಗಳ ಅವಕಾಶ ಪಡೆದಿದ್ದ ಶರಪೋವಾ ಈ ಪೈಕಿ 3ರಲ್ಲಿ ಯಶಸ್ವಿಯಾದರೆ, ಸಿಮೋನಾ 4 ಬ್ರೇಕ್ ಪಾಯಿಂಟ್ ಅವಕಾಶಗಳ ಪೈಕಿ 2ರಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು.
ಇನ್ನು ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಸೆಟ್ ಹೋರಾಟ ತೀವ್ರ ಕುತೂಹಲ ಕೆರಳಿಸಿತ್ತು. ಶರಪೋವಾ ಗೆಲ್ಲುವ ಅವಕಾಶ ಹೊಂದಿದ್ದರೂ ಸಹ ಕೆಲ ಅನಗತ್ಯ ತಪ್ಪುಗಳನ್ನೆಸಗಿ ಅಂಕಗಳನ್ನು ಕಳೆದುಕೊಂಡರು. 72 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ರೊಮೇನಿಯಾ ಆಟಗಾರ್ತಿಯು ಟೈಬ್ರೇಕರ್‌ನಲ್ಲಿ ಸೆಟ್ ವಶಕ್ಕೆ ಪಡೆದು ಶರಪೋವಾಗೆ ತಿರುಗಿಬಿದ್ದರು.
ಇನ್ನು ನಿರ್ಣಾಯಕ ಮೂರನೇ ಸೆಟ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆದ ಶರಪೋವಾ 53 ನಿಮಿಷಗಳ ಪೈಪೋಟಿ ಬಳಿಕ ಚಾಂಪಿಯನ್ ಪಟ್ಟ ಖಾತ್ರಿಪಡಿಸಿಕೊಂಡರು.
ಈ ಗೆಲವಿನೊಂದಿಗೆ ಶರಪೋವಾ ಜೀವನದ ಐದನೇ ಹಾಗೂ ಎರಡನೇ ಫ್ರೆಂಚ್ ಓಪನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮುನ್ನ 2012ರಲ್ಲಿ ಇಲ್ಲಿ ಮೊದಲ ಬಾರಿಗೆ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಕಳೆದ ಸಾಲಿನ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಹೊಂದಿದ್ದ ಶರಪೋವಾ, ಈ ಬಾರಿ ಅದಕ್ಕೆ ತಕ್ಕ ಸೇಡು ತೀರಿಸಿಕೊಳ್ಳುವ ಮೂಲಕ ಟ್ರೋಫಿಯನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡರು.
ಉಳಿದಂತೆ, ರಷ್ಯನ್ ಆಟಗಾರ್ತಿಯು 2004ರಲ್ಲಿ ವಿಂಬಲ್ಡನ್, 2006ರಲ್ಲಿ ಅಮೆರಿಕನ್ ಓಪನ್ ಹಾಗೂ 2008ರಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಮತ್ತೊಂದೆಡೆ ಇದೇ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ್ದ ರೊಮೇನಿಯಾ ಆಟಗಾರ್ತಿ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement