ಭಾರತದ ಆಟಗಾರರಲ್ಲಿ ಸ್ವಯಂ ನಂಬಿಕೆ' ಬೇಕು
ದಿ ಹೇಗ್ (ಹಾಲೆಂಡ್): ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ 'ಸ್ವಯಂ ನಂಬಿಕೆ'ಯೊಂದಿಗೆ ಪ್ರದರ್ಶನ ನೀಡಬೇಕು ಎಂದು ಕೋಚ್ ಟೆರ್ರಿ ವಾಲ್ಶ್ ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಮಲೇಷ್ಯಾ ವಿರುದ್ಧ ಮಾತ್ರ ಜಯ ಕಂಡಿರುವ ಭಾರತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 'ಭಾರತ ತಂಡ ಯುವ ಆಟಗಾರರಿಂದ ಕೂಡಿದೆ. ಅಲ್ಲದೆ, ನಾವು ಸಕಾರಾತ್ಮಕವಾಗಿ ಮುನ್ನಡೆಯುತ್ತಿದ್ದೇವೆ. ಹೀಗಾಗಿ ನಾವು ನಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದುವ ಅಗತ್ಯವಿದೆ. ಹೀಗಾದಲ್ಲಿ ಮಾತ್ರ ವಿಶ್ವದ ಶ್ರೇಷ್ಠ ತಂಡದ ವಿರುದ್ಧ ಉತ್ತಮ ಸ್ಪರ್ಧೆಯೊಡ್ಡಲು ಸಾಧ್ಯವಾಗಲಿದೆ' ಎಂದಿದ್ದಾರೆ.