ಶೀ- ಶಾಯಿ ಪೆಂಗ್ಗೆ ಡಬಲ್ಸ್ ಪ್ರಶಸ್ತಿ
ಪ್ಯಾರಿಸ್: ಚೈನೀಸ್ ತೈಪೇನ ಸೂ ವೀ ಶೀ ಮತ್ತು ಚೀನಾದ ಶಾಯಿ ಪೆಂಗ್ ಅವರು ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೂ ವೀ ಶೀ ಮತ್ತು ಶಾಯಿ ಪೆಂಗ್ ಅವರು ಇಟಲಿಯ ಸಾರಾ ಎರಾನಿ ಮತ್ತು ರಾಬರ್ಟಾ ವಿನ್ಸಿ ಅವರನ್ನು 6-4, 6-1 ನೇರ ಸೆಟ್ಗಳಿಂದ ಸೋಲಿಸಿದರು.
ಅಗ್ರಶ್ರೇಯಾಂಕ ಹೊಂದಿದ್ದ ಚೈನೀಸ್ ತೈಪೇ ಮತ್ತು ಚೀನಾ ಜೋಡಿಯು ಎರಡೂ ಸೆಟ್ಗಳಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸುವ ಮೂಲಕ ಎರಡನೇ ಶ್ರೇಯಾಂಕಿತ ಸಾರಾ ಮತ್ತು ರಾಬರ್ಟಾ ವಿರುದ್ಧ ನಿರೀಕ್ಷಿತ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಈ ಮಧ್ಯೆ ಪುರುಷರ ಡಬಲ್ಸ್ ವಿಭಾಗದಲ್ಲಿ ಫ್ರಾನ್ಸ್ನ ಜೂಲಿಯನ್ ಬೆನ್ನೆಟ್ಯೂ ಮತ್ತು ಎಡ್ವರ್ಡ್ ರೋಜರ್ ವ್ಯಾಸೆಲಿನ್ ಅವರು ಚಾಂಪಿಯನ್ಪಟ್ಟ ಅಲಂಕರಿಸಿದ್ದಾರೆ.
ಶನಿವಾರ ರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಸಮರದಲ್ಲಿ 11ನೇ ಶ್ರೇಯಾಂಕಿತ ಜೋಡಿಯಾದ ಜೂಲಿಯನ್ ಮತ್ತು ಎಡ್ವರ್ಡ್ 6-3, 7-6 (7-1) ನೇರ ಸೆಟ್ಗಳಿಂದ 12ನೇ ಶ್ರೇಯಾಂಕಿತ ಜೋಡಿ ಸ್ಪೇನಿನ ಮಾರ್ಸೆಲ್ ಗ್ರ್ಯಾನೊಲರ್ಸ್ ಮತ್ತು ಮಾರ್ಕ್ ಲೂಪೆಜ್ ವಿರುದ್ಧ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.