ಶ್ರಮ ಫಲಿಸಿತು: ಶರಪೋವಾ
ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ರಷ್ಯಾದ...
ಪ್ಯಾರಿಸ್: ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ರಷ್ಯಾದ ಟೆನಿಸ್ ತಾರೆ ಮಾರಿಯಾ ಶರಪೋವಾ, ಕ್ಲೇ ಕೋರ್ಟ್ನಲ್ಲಿ ಪ್ರಶಸ್ತಿ ಗೆಲ್ಲಲು ಹಾಕಿದ ಪರಿಶ್ರಮ ಫಲ ನೀಡಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ತೀವ್ರ ಹಣಾಹಣಿಯಲ್ಲಿ ರೊಮೇನಿಯಾದ ಸಿಮೊನಾ ಹಾಲೆಪ್ ವಿರುದ್ಧ 6-4, 6-7 (5/7), 6-4 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿ ಶರಪೋವಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಈ ಗೆಲವಿನ ಅನುಭವ ಅತ್ಯುತ್ತಮವಾಗಿದೆ. ನಾನು ಸಾಕಷ್ಟು ಪರಿಶ್ರಮ ಹಾಕಿ ಈ ಸಾಧನೆ ಮಾಡಿದ್ದು, ಹೆಚ್ಚು ತೃಪ್ತಿ ತಂದಿದೆ. ಈ ಪ್ರಶಸ್ತಿ ಗೆಲವಿನ ಸಂತಸವನ್ನು ಬೇರೆಯಾವುದು ತುಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಪ್ರಶಸ್ತಿ ಗೆಲ್ಲುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮದ ಅಗತ್ಯವಿದೆ. ನಾವು ಕ್ಲೇ ಕೋರ್ಟ್ನಲ್ಲೇ ಹುಟ್ಟಿ ಬೆಳೆದಿಲ್ಲ. ಅಲ್ಲದೆ ನಡಾಲ್ ರೀತಿಯಲ್ಲಿ ಕ್ಲೇ ಕೋರ್ಟ್ ಆಟಗಾರರು ಅಲ್ಲ. ನಾನು ಹೆಚ್ಚು ಕ್ಲೇ ಕೋರ್ಟ್ನಲ್ಲಿ ಆಡಿಲ್ಲ. ಹಾಗಾಗಿ ಹೆಚ್ಚಿನ ಪರಿಶ್ರಮ ಹಾಕಿ ಈ ಪ್ರಶಸ್ತಿ ಪಡೆದಿದ್ದೇನೆ ಎಂದು ತಿಳಿಸಿದರು.
ನಾನು ಮೊದಲ ಗ್ರ್ಯಾನ್ಸ್ಲಾಮ್ ಗೆದ್ದು ನಂತರದ 10 ವರ್ಷಗಳ ಪಯಣ ಅತ್ಯುತ್ತಮವಾಗಿದೆ. 5ನೇ ಗ್ರ್ಯಾನ್ಸ್ಲಾಮ್ ಗೆಲ್ಲುವ ಮೂಲಕ ಯಶಸ್ವಿಯಾಗಿದೆ. ಈ ಕ್ಷಣ ಭಾವನಾತ್ಮಕವಾಗಿದೆ. ಅನುಭವವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದರು. ಇನ್ನು ವಿಂಬಲ್ಡನ್ಗಿಂತ ಫ್ರೆಂಚ್ ಓಪನ್ ಎಷ್ಟು ಪ್ರಮುಖ ಎಂಬ ಪ್ರಶ್ನೆಗೆ ಉತ್ತರಿಸಿದ ಶರಪೋವಾ, ನಾನು ಲಂಡನ್ನಲ್ಲಿದ್ದಾಗ ವಿಂಬಲ್ಡನ್ ಎಷ್ಟು ಮುಖ್ಯವೊ ಅದೇರೀತಿ, ಪ್ಯಾರಿಸ್ನಲ್ಲಿದ್ದಾಗ ಫ್ರೆಂಚ್ ಓಪನ್ ಅಷ್ಟೇ ಮಹತ್ವದ್ದಾಗಿದೆ ಎಂದು ತಿಳಿಸಿದರು.