ಸೆಮೀಸ್ಗೆ ಹಾಲೆಂಡ್
ದಿ ಹೇಗ್ (ಹಾಲೆಂಡ್): ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಹಾಲೆಂಡ್ ತಂಡದ ಆಟಗಾರ್ತಿಯರು ವಿಶ್ವಕಪ್ ಹಾಕಿ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಕ್ಯುಸೇರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹಾಲೆಂಡ್ ವನಿತೆಯರು 2-0 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಪರಾಭವಗೊಳಿಸಿ ನಾಲ್ಕರಘಟ್ಟಕ್ಕೆ ಹೆಜ್ಜೆ ಹಾಕಿದರು. ವಿಜೇತ ಹಾಲೆಂಡ್ ತಂಡದ ಪರ ಪಂದ್ಯದ 57ನೇ ನಿಮಿಷದಲ್ಲಿ ಕಿಮ್ ಲ್ಯಾಮರ್ಸ್ ಹಾಗೂ ಪಂದ್ಯದ 65ನೇ ನಿಮಿಷದಲ್ಲಿ ನೌಮಿ ಗೋಲು ಬಾರಿಸಿ ಆಟದಲ್ಲಿ ಮಿಂಚಿದರು.
ಈ ಗೆಲವಿನೊಂದಿಗೆ ಹಾಲೆಂಡ್ ತಂಡ ನಾಲ್ಕು ಪಂದ್ಯಗಳಿಂದ ಅಂಕ ಸಂಪಾದನೆಯನ್ನು 12ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ 'ಎ' ಗುಂಪಿನಿಂದ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು.
ಇದೇ ಗುಂಪಿನಲ್ಲಿರುವ ಆಸ್ಟ್ರೇಲಿಯಾ 9 ಅಂಕ ಗಳಿಸಿದ್ದರೆ, ದಕ್ಷಿಣ ಕೊರಿಯಾ 7 ಮತ್ತು ನ್ಯೂಜಿಲೆಂಡ್ 6 ಅಂಕಗಳನ್ನು ಕಲೆಹಾಕಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ದಕ್ಷಿಣ ಕೊರಿಯಾ ತಂಡದ ಮಹಿಳೆಯರು ಬೆಲ್ಜಿಯಂ ವಿರುದ್ಧ 4-2 ಗೋಲುಗಳಿಂದ ಜಯ ದಾಖಲಿಸುವುದರೊಂದಿಗೆ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.