ಎಡಿಇ ಚೊಚ್ಚಲ ಚಾಂಪಿಯನ್
ಬೆಂಗಳೂರು: ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಎಡಿಇ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಟೂರ್ನಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಜಾರ್ಜ್ ಹೂವರ್ ಕಪ್ ಅನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಎಡಿಇ ತಂಡ 1-1 ಗೋಲಿನಿಂದ ಸಿಐಎಲ್ ತಂಡದ ಡ್ರಾ ಫಲಿತಾಂಶ ಪಡೆಯಿತು.
ಸಿಐಎಲ್ ತಂಡದ ಪರ ಸಂತೋಷ್ 36ನೇ ನಿಮಿಷ ಹಾಗೂ ಎಡಿಇ ಪರ ರಾಜು 49ನೇ ನಿಮಿಷದಲ್ಲಿ ಗೋಲುಗಳಿಸಿದರು. ಈ ಡ್ರಾನೊಂದಿಗೆ ಎಡಿಇ ತಂಡ ಅಂಕಗಳಿಕೆಯನ್ನು 17ಕ್ಕೆ ಹೆಚ್ಚಿಸಿಕೊಂಡು ಒಟ್ಟು 9 ತಂಡಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಗೌರವದೊಂದಿಗೆ ಚಾಂಪಿಯನ್ ಎನಿಸಿಕೊಂಡಿತು.
ಎಡಿಇ ತಂಡ ಆಡಿದ 8 ಪಂದ್ಯಗಳಲ್ಲಿ 5 ಗೆಲವು, 2 ಡ್ರಾ ಮತ್ತು 1 ಸೋಲಿನ ಫಲಿತಾಂಶದೊಂದಿಗೆ ಟೂರ್ನಿಯಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿದೆ. ಎಡಿಇ ತಂಡ 1982ರಲ್ಲಿ 'ಸಿ' ಡಿವಿಜನ್ ಮೂಲಕ ರಾಜ್ಯ ಲೀಗ್ಗೆ ಪ್ರವೇಶ ಪಡೆದಿತ್ತು. ಬಳಿಕ 1987ರಲ್ಲಿ 'ಎ' ಡಿವಿಜನ್ಗೆ ಅರ್ಹತೆ ಪಡೆಯಿತು. ಇಲ್ಲಿ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸುವ ಮೂಲಕ 2000ನೇ ಸಾಲಿನಿಂದ ಸೂಪರ್ ಡಿವಿಜನ್ಲ್ಲಿ ತನ್ನ ಅಭಿಯಾನ ಆರಂಭಿಸಿತು. ಇದೀಗ ಮೊದಲ ಬಾರಿಗೆ ಪ್ರಶಸ್ತಿಮುಡಿಗೇರಿಸಿಕೊಂಡು ರಾಜ್ಯ ಲೀಗ್ನಲ್ಲಿ ಪಾರುಪತ್ಯ ಸ್ಥಾಪಿಸಿತು.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಸೌತ್ ಯುನೈಟೆಡ್ ಮತ್ತು ಎಂಇಜಿ ತಂಡಗಳು ಮುಖಾಮುಖಿಯಾಗಲಿದ್ದು, ಇಲ್ಲಿನ ಫಲಿತಾಂಶದ ಆಧಾರದ ಮೇಲೆ ರನ್ನರ್ಸ್-ಅಪ್ ತಂಡದ ನಿರ್ಧಾರವಾಗಲಿದೆ.